ಮುಂಬೈ: ಇಲ್ಲಿನ ಚಾಂದಿವಲಿ ನಗರದಲ್ಲಿ ತೆರೆದ ಒಳಚರಂಡಿಯ ಗುಂಡಿಗೆ (ಮ್ಯಾನ್‌ಹೋಲ್) ಬಿದ್ದು ವ್ಯಕ್ತಿಯೊಬ್ಬರು ಗುರುವಾರ ಮೃತಪಟ್ಟಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೃಹನ್ ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಭಾರಿ ಮಳೆಯಿಂದಾಗಿ ನೀರು ತುಂಬಿದ್ದರಿಂದ ಗುಂಡಿ ಇರುವುದು ಕಾಣದಾಗಿತ್ತು. ಈ ವೇಳೆ ದುರ್ಘಟನೆ ಸಂಭವಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ನಗರದಲ್ಲಿ ಒಂದೇ ವಾರದಲ್ಲಿ ನಡೆದ ಎರಡನೇ ದುರ್ಘಟನೆ ಇದಾಗಿದ್ದು, ಮುಂಗಾರಿಗೆ ಮುಂಚಿತವಾಗಿ ಕೈಗೊಳ್ಳಬೇಕಿದ್ದ ಕ್ರಮಗಳ ಕುರಿತು ಹಲವು ನಾಯಕರು ಪಾಲಿಕೆಯನ್ನು ಪ್ರಶ್ನಿಸಿದ್ದಾರೆ.
ವಿಪತ್ತು ನಿರ್ವಹಣಾ ತಂಡ ಹಾಗೂ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ, ವ್ಯಕ್ತಿಯ ಮೃತದೇಹವನ್ನು ಹೊರತೆಗೆದಿದ್ದಾರೆ. ಮೃತ ವ್ಯಕ್ತಿಯನ್ನು ಅಸ್ಲಾಂ ಇಶಾಖ್ ಶೇಖ್ (55) ಎಂದು ಗುರುತಿಸಲಾಗಿದೆ. ಮೇಯರ್ ರಿತು ತಾವ್ಡೆ ಅವರು ಘಟನಾ ಸ್ಥಳಕ್ಕೆ ಭೇಟಿ ನೀಡಿ, ಮೃತನ ಕುಟುಂಬಕ್ಕೆ ₹10 ಲಕ್ಷ ಪರಿಹಾರ ಘೋಷಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಒಳಚರಂಡಿ ನಿರ್ಮಾಣದ ಗುತ್ತಿಗೆದಾರರನ್ನು ಹೊಣೆಯಾಗಿಸಿ, ಪುರಸಭೆ ಅಧಿಕಾರಿಗಳು ಪ್ರಕರಣ ದಾಖಲಿಸಲಿದ್ದಾರೆ ಎಂದು ಉಪ ಮೇಯರ್ ಸಂಜಯ್ ಗಾಂಧಿ ತಿಳಿಸಿದ್ದಾರೆ.
ಜತೆಗೆ ಮ್ಯಾನ್‌ಹೋಲ್‌ನಲ್ಲಿ ಬಿದ್ದು ಜನರು ಮೃತಪಡುತ್ತಿರುವ ಪ್ರಕರಣಗಳ ಕುರಿತು ತನಿಖೆ ನಡೆಸಿ, ಈ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಹೆಚ್ಚುವರಿ ಮುನ್ಸಿಪಲ್ ಆಯುಕ್ತರ ನೇತೃತ್ವದ ಸಮಿತಿ ರಚಿಸಲಾಗಿದೆ. ತೆರೆದ ಒಳಚರಂಡಿಯ ಸುತ್ತ ಬ್ಯಾರಿಕೇಡ್‌ಗಳನ್ನು ನಿಯೋಜಿಸಿ, ಪ್ರದೇಶಗಳನ್ನು ಪರಿಶೀಲಿಸುವಂತೆಯೂ ಎಲ್ಲಾ ಇಲಾಖೆಗಳಿಗೆ ಪಾಲಿಕೆ ಸೂಚಿಸಿದೆ.

ತೆರೆದ ಒಳಚರಂಡಿ ಗುಂಡಿಗೆ ಬಿದ್ದಿದ್ದ ವ್ಯಕ್ತಿಯನ್ನು ರಕ್ಷಿಸಲು ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದರು
ಭಾರಿ ಮಳೆ ಸಂಚಾರ ವ್ಯತ್ಯಯ
ಮುಂಬೈನ ಹಲವು ಪ್ರದೇಶಗಳಲ್ಲಿ ಗುರುವಾರ ಭಾರಿ ಮಳೆಯಾಗಿದೆ. ಇದರಿಂದ ಹಲವೆಡೆ ವಾಹನಗಳ ಸಂಚಾರಕ್ಕೆ ಅಡೆತಡೆಯಾಗಿದ್ದು ಇನ್ನೂ ಹೆಚ್ಚು ಮಳೆಯಾಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಕಳೆದ 24 ಗಂಟೆಯಲ್ಲಿ ಹಲವು ಪ್ರದೇಶಗಳಲ್ಲಿ 200 ಮಿ.ಮೀಗಿಂತಲೂ ಹೆಚ್ಚು ಮಳೆಯಾಗಿದೆ. ದಾದರ್ ಪರೇಲ್ ವೊರ್ಲಿ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ರಸ್ತೆಗಳಲ್ಲಿ ಮಳೆ ನೀರು ನಿಂತಿತ್ತು. ರೈಲ್ವೆ ಹಳಿಗಳ ಮೇಲೂ ಮಳೆ ನೀರು ನಿಂತಿದ್ದರಿಂದ ಸ್ಥಳೀಯ ರೈಲು ಸಂಚಾರದಲ್ಲೂ ವ್ಯತ್ಯಯವಾಗಿದೆ ಎಂದು ಬಿಎಂಸಿ ಅಧಿಕಾರಿಗಳು ಹೇಳಿದ್ದಾರೆ. ಗುರುವಾರ ರಾತ್ರಿಯಿಂದ ಶುಕ್ರವಾರ ಬೆಳಗಿನವರೆಗೆ ಮುಂಬೈ ಮತ್ತು ಉಪನಗರಗಳಲ್ಲಿ ಗಂಟೆಗೆ 50-60 ಕಿ.ಮೀ.ವೇಗದಲ್ಲಿ ಗಾಳಿ ಬೀಸಲಿದ್ದು ಭಾರಿ ಮಳೆಯಾಗಲಿದೆ ಎಂದೂ ಐಎಂಡಿ ತಿಳಿಸಿದೆ.

