ಅಯೋಧ್ಯೆ: ಪ್ರಸಿದ್ಧ ರಾಮಮಂದಿರದ ದೇಣಿಗೆ ಹಣ ದುರುಪಯೋಗ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ನಿತ್ಯ ಲೂಟಿಯಾಗುತ್ತಿದ್ದ ಹಣದ ಅಂದಾಜು ಮೊತ್ತವನ್ನು ತನಿಖಾಧಿಕಾರಿಗಳು ಪತ್ತೆಹಚ್ಚಿದ್ದಾರೆ.
ಬ್ಯಾಂಕ್ ಅಧಿಕಾರಿಗಳನ್ನು ವಿಶೇಷ ತನಿಖಾ ತಂಡ (ಎಸ್‌ಐಟಿ) ವಿಚಾರಣೆ ನಡೆಸಿದ ವೇಳೆ ಈ ಮಾಹಿತಿ ಹೊರಬಿದ್ದಿದೆ.
ಬ್ಯಾಂಕ್ ಸಿಬ್ಬಂದಿ ಎಸ್‌ಐಟಿಗೆ ನೀಡಿರುವ ಮಾಹಿತಿ ಪ್ರಕಾರ, ಹಗರಣ ಬೆಳಕಿಗೆ ಬರುವ ಮುನ್ನ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಬ್ಯಾಂಕ್ ಖಾತೆಗಳಿಗೆ ಪ್ರತಿದಿನ ಸರಾಸರಿ ₹16 ಲಕ್ಷದಿಂದ ₹18 ಲಕ್ಷ ದೇಣಿಗೆ ಹರಿದುಬರುತ್ತಿತ್ತು. ಆದರೆ, ಹಗರಣ ಬಯಲಾದ ಬಳಿಕ ಪ್ರತಿದಿನದ ದೇಣಿಗೆ ಸಂಗ್ರಹದ ಮೊತ್ತ ದಿಢೀರನೆ ₹24 ಲಕ್ಷದಿಂದ ₹26 ಲಕ್ಷಕ್ಕೆ ಏರಿಕೆಯಾಗಿದೆ!
ಬ್ಯಾಂಕ್‌ನ ಈ ಅಂಕಿ-ಅಂಶಗಳ ಆಧಾರದ ಮೇಲೆ, ಪ್ರತಿದಿನ ₹6 ಲಕ್ಷದಿಂದ ₹8 ಲಕ್ಷದಷ್ಟು ದೇಣಿಗೆ ಹಣವನ್ನು ವ್ಯವಸ್ಥಿತವಾಗಿ ಲೂಟಿ ಮಾಡಲಾಗುತ್ತಿತ್ತು ಎಂದು ತನಿಖಾಧಿಕಾರಿಗಳು ಅಂದಾಜಿಸಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಎಸ್‌ಬಿಐ ಸಿಬ್ಬಂದಿ ಮೇಲೂ ತನಿಖೆ
ರಾಮಮಂದಿರದಲ್ಲಿ ಸಂಗ್ರಹವಾಗುವ ನಗದು ದೇಣಿಗೆಯ ಎಣಿಕೆಯ ಉಸ್ತುವಾರಿಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SಃI) ವಹಿಸಿಕೊಂಡಿದ್ದು, ಇದಕ್ಕಾಗಿ ಖಾಸಗಿ ಏಜೆನ್ಸಿಯೊಂದನ್ನು ಬಳಸಿಕೊಳ್ಳಲಾಗಿತ್ತು. ನಾಲ್ಕು ಕಾಣಿಕೆ ಹುಂಡಿಗಳಿಂದ ನಗದು ತೆಗೆದು ಎಣಿಕೆ ಮಾಡಲು 14 ಜನರ ತಂಡವನ್ನು ನಿಯೋಜಿಸಲಾಗಿತ್ತು. ಇದರಲ್ಲಿ 11 ಮಂದಿ ಬ್ಯಾಂಕ್ ಸಿಬ್ಬಂದಿ ಹಾಗೂ ಮೂವರು ಟ್ರಸ್ಟ್‌ನ ಪ್ರತಿನಿಧಿಗಳಾಗಿದ್ದರು.
ತನಿಖೆಯ ವೇಳೆ ಕೆಲವು ಎಸ್‌ಬಿಐ ಉದ್ಯೋಗಿಗಳ ಪಾತ್ರವೂ ಶಂಕಾಸ್ಪದವಾಗಿ ಕಂಡುಬಂದಿದೆ. ಹಣದ ಹರಿವು ಹಾಗೂ ಆರ್ಥಿಕ ವಹಿವಾಟುಗಳ ಬಗ್ಗೆ ಆಳವಾದ ತನಿಖೆ ನಡೆಸುವಂತೆ ಜಾರಿ ನಿರ್ದೇಶನಾಲಯಕ್ಕೆ ಪತ್ರ ಬರೆಯಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.
ನಿವೃತ್ತ ಬ್ಯಾಂಕ್ ಉದ್ಯೋಗಿ ಹಾಗೂ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಸುಭಾಷ್ ಶ್ರೀವಾಸ್ತವ ಈ ನಗದು ಎಣಿಕೆಯ ಉಸ್ತುವಾರಿ ವಹಿಸಿದ್ದನು. ಹುಂಡಿಗಳಿಂದ ನಗದು ಹೊರತೆಗೆದು, ಎಣಿಕೆ ಕೊಠಡಿಗೆ ತಲುಪಿಸಿ, ಬಳಿಕ ಎಸ್‌ಬಿಐಗೆ ಹಸ್ತಾಂತರಿಸುವುದು ಸುಭಾಷ್ ಶ್ರೀವಾಸ್ತವನ ಜವಾಬ್ದಾರಿಯಾಗಿತ್ತು. ಕಾಣಿಕೆಯಾಗಿ ಬರುತ್ತಿದ್ದ ಚಿನ್ನಾಭರಣಗಳಿಗೆ ಯಾವುದೇ ವ್ಯವಸ್ಥಿತ ದಾಖಲೆ ಇರಲಿಲ್ಲ. ಹೀಗಾಗಿ ಅವುಗಳನ್ನು ಕದಿಯುವುದು ಆರೋಪಿಗಳಿಗೆ ಸುಲಭವಾಗಿತ್ತು ಎಂದು ಮೂಲಗಳು ತಿಳಿಸಿವೆ.
ದೇವರು ನೋಡುತ್ತಿದ್ದಾನೆ!
ಈ ದರೋಡೆ ಪ್ರಕರಣ ಮೊದಲ ಬಾರಿಗೆ ಕಳೆದ ಫೆಬ್ರುವರಿಯಲ್ಲಿ ಬೆಳಕಿಗೆ ಬಂದಿತ್ತು. ನಗದು ಎಣಿಕೆ ತಂಡದ ಸದಸ್ಯನೊಬ್ಬ ಹಣ ಕಳ್ಳತನವಾಗುತ್ತಿರುವ ಬಗ್ಗೆ ಉಸ್ತುವಾರಿ ಸುಭಾಷ್ ಶ್ರೀವಾಸ್ತವ ಗಮನಕ್ಕೆ ತಂದಿದ್ದನು. ಅದಕ್ಕೆ ಶ್ರೀವಾಸ್ತವ, ದೇವರು ಎಲ್ಲವನ್ನೂ ನೋಡುತ್ತಿದ್ದಾನೆ, ಕಳ್ಳತನವಾಗುತ್ತಿರುವ ಹಣ ನಿನ್ನ ಮನೆಯಿಂದಾಗಲಿ ಅಥವಾ ನನ್ನ ಮನೆಯಿಂದಾಗಲಿ ಅಲ್ಲ ಬಿಡು, ಎಂದು ಬೇಜವಾಬ್ದಾರಿಯ ಉತ್ತರ ನೀಡಿದ್ದನು ಎನ್ನಲಾಗಿದೆ.
ಈ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಇದುವರೆಗೆ ಶ್ರೀವಾಸ್ತವ ಸೇರಿದಂತೆ ಎಂಟು ಮಂದಿ ಆರೋಪಿಗಳನ್ನು ಬಂಧಿಸಿದೆ. ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಟಿನ್ನು ಯಾದವ್, ಲವಕುಶ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ ಮತ್ತು ರಮಾಶಂಕರ್ ಮಿಶ್ರಾ ಬಂಧಿತ ಇತರ ಆರೋಪಿಗಳಾಗಿದ್ದಾರೆ.
ಬ್ಯಾಂಕ್ ಅಧಿಕಾರಿಗಳ ಸುದೀರ್ಘ ವಿಚಾರಣೆ
ಶುಕ್ರವಾರದಂದು ಎಸ್‌ಐಟಿ ತಂಡವು ನಗದು ಎಣಿಕೆಯಲ್ಲಿ ತೊಡಗಿದ್ದ ಸಿಬ್ಬಂದಿ ಮತ್ತು ಕೆಲ ಬ್ಯಾಂಕ್ ಉದ್ಯೋಗಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿತು. ಟ್ರಸ್ಟ್ ಮತ್ತು ಬ್ಯಾಂಕ್ ನಡುವಿನ ಒಪ್ಪಂದವನ್ನು ಸಂಪೂರ್ಣವಾಗಿ ಪಾಲಿಸದಿರಲು ಕಾರಣವೇನು? ನಿಯಮಾವಳಿಗಳಲ್ಲಿ ಬದಲಾವಣೆ ಮಾಡಿದ್ದೇಕೆ? ಮತ್ತು ಯಾವುದೇ ಹಂತದಲ್ಲಿ ಅಕ್ರಮದ ಶಂಕೆ ವ್ಯಕ್ತವಾದರೂ ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ಏಕೆ ತರಲಿಲ್ಲ? ಎಂದು ಬ್ಯಾಂಕ್ ಅಧಿಕಾರಿಗಳನ್ನು ಪ್ರಶ್ನಿಸಲಾಯಿತು ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ.
ಭದ್ರತಾ ಕೆಲಸಗಳಿಗಾಗಿ ನಿಯೋಜಿಸಲಾಗಿದ್ದ ಖಾಸಗಿ ಭದ್ರತಾ ಏಜೆನ್ಸಿಗೆ ನಗದು ಎಣಿಕೆಯಂತಹ ಸೂಕ್ಷ್ಮ ಜವಾಬ್ದಾರಿಯನ್ನು ವಹಿಸಿಕೊಟ್ಟಿದ್ದು ಏಕೆ ಎಂದೂ ಎಸ್‌ಐಟಿ ಪ್ರಶ್ನಿಸಿದೆ. ಈ ಹಗರಣದಲ್ಲಿ ಬ್ಯಾಂಕ್ ಸಿಬ್ಬಂದಿಯ ಪಾತ್ರದ ಕುರಿತು ಎಸ್‌ಐಟಿ ತನ್ನ ಅಂತಿಮ ವರದಿಯಲ್ಲಿ ಉಲ್ಲೇಖಿಸಲಿದ್ದು, ಆ ಬಳಿಕ ಅವರ ವಿರುದ್ಧವೂ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ.

