ನವದೆಹಲಿ: ಸಿಂಧೂ ನದಿ ನೀರು ಹಂಚಿಕೆ ಒಪ್ಪಂದದ (ಐಡಬ್ಲ್ಯೂಟಿ) ಕುರಿತು ಭಾರತದ ನಿಲುವು ಅತ್ಯಂತ ಸ್ಪಷ್ಟವಾಗಿದೆ. ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನ ನಿರಂತರವಾಗಿ ಬೆಂಬಲ ನೀಡುತ್ತಿರುವುದಕ್ಕೆ ಪ್ರತಿಕ್ರಿಯೆಯಾಗಿ ಈ ಒಪ್ಪಂದವನ್ನು ಅಮಾನತಿನಲ್ಲಿಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (ಎಂಇಎ) ಶುಕ್ರವಾರ ಪುನರುಚ್ಚರಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಸಿಂಧೂ ಜಲ ಒಪ್ಪಂದದ ಬಗ್ಗೆ ಭಾರತದ ನಿಲುವು ಸ್ಥಿರವಾಗಿದೆ. ಪಾಕಿಸ್ತಾನ ಗಡಿಯಾಚೆಗಿನ ಭಯೋತ್ಪಾದನೆಗೆ ನೀಡುತ್ತಿರುವ ಬೆಂಬಲವನ್ನು ನಂಬಲರ್ಹ ಮತ್ತು ಶಾಶ್ವತ ರೀತಿಯಲ್ಲಿ ಸಂಪೂರ್ಣವಾಗಿ ನಿಲ್ಲಿಸುವವರೆಗೂ ಈ ಒಪ್ಪಂದ ಅಮಾನತಿನಲ್ಲಿರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.
2025ರ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ಬಳಿಕ ಪಾಕಿಸ್ತಾನದ ವಿರುದ್ಧ ಭಾರತವು ಹಲವು ದಂಡನಾತ್ಮಕ ಕ್ರಮಗಳನ್ನು ಕೈಗೊಂಡಿದೆ. ಉಭಯ ರಾಷ್ಟ್ರಗಳ ನಡುವೆ ನಡೆದಿದ್ದ ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿರಿಸಿದೆ.
ಸಿಂಧೂ ನದಿ ಹಾಗೂ ಅವುಗಳ ಉಪನದಿಗಳ ನೀರು ಹಂಚಿಕೆ ಹಾಗೂ ಬಳಕೆಗೆ ಸಂಬಂಧಿಸಿ 1960ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ವಿಶ್ವಬ್ಯಾಂಕ್ ಮಧ್ಯಸ್ಥಿಕೆಯಲ್ಲಿ ಒಪ್ಪಂದಕ್ಕೆ ಸಹಿ ಹಾಕಿದ್ದವು.
ಭಾರತದ ನಡೆಗೆ ಪಾಕ್ ಆಕ್ಷೇಪ
ಸಿಂಧೂ ನದಿ ನೀರು ಒಪ್ಪಂದದ ಅಡಿಯಲ್ಲಿ ಪಶ್ಚಿಮ ನದಿಗಳ ನೀರಿನ ನಿರ್ಬಂಧಿತ ಅವಕಾಶವನ್ನು ಭಾರತವು ದುರುಪಯೋಗಪಡಿಸಿಕೊಳ್ಳುವಂತಿಲ್ಲ ಎಂದು ಪಾಕಿಸ್ತಾನ ಹೇಳಿದೆ.
ಸಿಂಧೂ ಜಲ ಒಪ್ಪಂದವನ್ನು ಅಮಾನತಿನಲ್ಲಿರಿಸಿರುವ ಭಾರತದ ನಿರ್ಧಾರವನ್ನು ನಾವು ತಿರಸ್ಕರಿಸುತ್ತೇವೆ. ಯಾವುದೇ ಒಂದು ದೇಶ, ಒಪ್ಪಂದವನ್ನು ಏಕಪಕ್ಷೀಯವಾಗಿ ಅಮಾನತುಗೊಳಿಸಲು ಅಥವಾ ರದ್ದುಗೊಳಿಸಲು ಸಾಧ್ಯವಿಲ್ಲ. 1960ರ ಒಪ್ಪಂದವು ಇಂದಿಗೂ ಕಾನೂನುಬದ್ಧ ಮತ್ತು ಜಾರಿಯಲ್ಲಿದೆ ಎಂದು ಪಾಕಿಸ್ತಾನದ ಉಪಪ್ರಧಾನಿ ಇಶಾಕ್ ದಾರ್ ಪ್ರತಿಪಾದಿಸಿದ್ದಾರೆ.

