ಶಿಮ್ಲಾ: ಹಿಮಾಚಲ ಪ್ರದೇಶದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ಕೃಷಿ ಮಹತ್ವದ ಎಂಟು ಸಾಂಪ್ರದಾಯಿಕ ಉತ್ಪನ್ನಗಳು ಭೌಗೋಳಿಕ ಸೂಚ್ಯಂಕದ(ಜಿಐ) ಟ್ಯಾಗ್ ಅನ್ನು ಪಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಿಐ ಅಡಿಯಲ್ಲಿ ಹೊಸದಾಗಿ ನೋಂದಾಯಿಸಲಾದ ಉತ್ಪನ್ನಗಳಲ್ಲಿ ಸ್ಪಿತಿಯ ಸೀಬಕ್‌ಥಾರ್ನ್ (ಸಮುದ್ರ ಮುಳ್ಳಿನ ಗಿಡದ ಹಣ್ಣು), ಸಲೂನಿ ಬಿಳಿ ಜೋಳ, ಚಂಬಾ ಮೆಟಲ್ ಆರ್ಟ್, ಸಿರ್ಮೌರಿ ಲೋಯಾ(ಹಟ್ಟಿ ಬುಡಕಟ್ಟು ಜನಾಂಗ ಕೈಯಿಂದ ನೇಯುವ ಸಾಂಪ್ರದಾಯಿಕ ಉಣ್ಣೆಯ ಉಡುಪು), ಕಿನ್ನೌರಿ ಟೋಪಿ, ಮಂಡಿಯ ಸೇಪು ವಡಿ ಖಾದ್ಯ, ಕಿನ್ನೌರಿ ಸೇಬು ಮತ್ತು ಕಿನ್ನೌರಿ ಆಭರಣಗಳು ಸೇರಿವೆ.
ಈ ಹೊಸ ಸೇರ್ಪಡೆಯೊಂದಿಗೆ ಹಿಮಾಚಲ ಪ್ರದೇಶ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರ ಮಂಡಳಿಯ ಮೂಲಕ ಹಿಮಾಚಲ ಪ್ರದೇಶದ 17 ಸಾಂಪ್ರದಾಯಿಕ ಉತ್ಪನ್ನಗಳಿಗೆ ಜಿಐ ಟ್ಯಾಗ್ ಪಡೆದುಕೊಂಡಿದೆ.
ಈ ಉತ್ಪನ್ನಗಳು ಹಿಮಾಚಲ ಪ್ರದೇಶದ ಶ್ರೀಮಂತ ಪರಂಪರೆ, ಸಾಂಪ್ರದಾಯಿಕ ಜ್ಞಾನ, ಕರಕುಶಲತೆ ಮತ್ತು ಕೃಷಿ ಶ್ರೇಷ್ಠತೆಯನ್ನು ಪ್ರತಿನಿಧಿಸುತ್ತವೆ. ರಾಜ್ಯದ ವಿಶಿಷ್ಟ ಗುರುತನ್ನು ಪ್ರತಿಬಿಂಬಿಸುತ್ತವೆ.
ಈ ಸಾಂಪ್ರದಾಯಿಕ ಉತ್ಪನ್ನಗಳ ಜಿಐ ನೋಂದಣಿಯ ಸಾಧನೆಗಾಗಿ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ರಾಜ್ಯದ ಜನರನ್ನು ಅಭಿನಂದಿಸಿದ್ದಾರೆ.
ಕಳೆದ ಮೂರುವರೆ ವರ್ಷಗಳಲ್ಲಿ ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಪರಂಪರೆಯನ್ನು ಸಂರಕ್ಷಿಸಲು ಮತ್ತು ಉತ್ತೇಜಿಸಲು ರಾಜ್ಯ ಸರ್ಕಾರದ ನಿರಂತರ ಪ್ರಯತ್ನಗಳಿಗೆ ಈ ಸಾಧನೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.
'ಈ ಮನ್ನಣೆಯು ನಮ್ಮ ಅಮೂಲ್ಯ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸಲು ಸಹಾಯ ಮಾಡುತ್ತದೆ. ಆರ್ಥಿಕ ಬೆಳವಣಿಗೆ, ಗ್ರಾಮೀಣ ಉದ್ಯಮಶೀಲತೆ ಮತ್ತು ಸುಸ್ಥಿರ ಜೀವನೋಪಾಯಕ್ಕೆ ಹೊಸ ಮಾರ್ಗಗಳನ್ನು ತೆರೆಯುತ್ತದೆ' ಎಂದು ಅವರು ತಿಳಿಸಿದ್ದಾರೆ.

