ನವದೆಹಲಿ: ನಕಲಿ ಔಷಧ ತಯಾರಿಕೆ ದಂಧೆ ತನಿಖೆಗೆ ಸಂಬಂಧಿಸಿ ₹3 ಕೋಟಿ ಲಂಚ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿ ದೀಪಕ್ ಗಹ್ಲಾವತ್ ಅವರನ್ನು ಸಿಬಿಐ ಬಂಧಿಸಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
ಅಪರಾಧ ನಡೆದಿದೆ ಎಂದು ಆರೋಪಿಸಲಾದ ಸಮಯದಲ್ಲಿ ಗಹ್ಲಾವತ್ ಅವರು ನಾಗರಿಕ ವಿಮಾನಯಾನ ಭದ್ರತಾ ಬ್ಯೂರೋದಲ್ಲಿ (ಬಿಸಿಎಎಸ್) ಪ್ರಾದೇಶಿಕ ನಿರ್ದೇಶಕರಾಗಿ ನೇಮಕಗೊಂಡಿದ್ದರು.
ಈ ವೇಳೆ ಲಂಚಕ್ಕೆ ಪ್ರತಿಯಾಗಿ ಸಿಬಿಐ ಅಧಿಕಾರಿಗಳ ಮೇಲೆ ತಮ್ಮ ಪ್ರಭಾವ ಬಳಸಿಕೊಂಡು ಪುದುಚೇರಿ ಮೂಲದ ಉದ್ಯಮಿಯೊಬ್ಬರಿಗೆ ಏಜೆನ್ಸಿಯ ತನಿಖೆಯಲ್ಲಿ ಅವರಿಗೆ ಅನುಕೂಲ ಮಾಡಿಕೊಡುವುದಾಗಿ ಖಾತರಿ ನೀಡಿದ್ದರು ಎಂಬ ಆರೋಪ ಅವರ ಮೇಲೆಯಿದೆ.
ಉದ್ಯಮಿಗೆ ಅನುಕೂಲವಾಗುವಂತೆ ಸಿಬಿಐ ತನಿಖೆ ನಡೆಸುವ ಖಾತರಿ ನೀಡಿ ₹3 ಕೋಟಿ ಲಂಚ ಕೇಳಿದ್ದ ಗಹ್ಲಾವತ್ ಅವರು ₹1.5 ಕೋಟಿಯನ್ನು ಮುಂಗಡವಾಗಿ ನೀಡುವಂತೆ ಬೇಡಿಕೆ ಇಟ್ಟಿದ್ದರು.

