ಪನ್ನಾ: ಮಧ್ಯಪ್ರದೇಶದ ಪನ್ನಾ ಜಿಲ್ಲೆಯು ವಿಶ್ವದಲ್ಲೇ ತನ್ನ ಅಪರೂಪದ ವಜ್ರದ ನಿಕ್ಷೇಪಗಳಿಗೆ ಪ್ರಸಿದ್ಧಿಯಾಗಿದೆ. ಭಾರತದಲ್ಲಿ ಸಕ್ರಿಯ ವಜ್ರ ಉತ್ಖನನ ಪ್ರದೇಶಗಳಲ್ಲಿ ಇದು ಒಂದಾಗಿದೆ.
ಪನ್ನಾ ಪ್ರದೇಶವೀಗ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಬುಡಕಟ್ಟಿನ ರೈತ ಕುಟುಂಬವೊಂದಕ್ಕೆ ಅದೃಷ್ಟದ ದೇವತೆ ಮತ್ತೆ ಒಲಿದಿದ್ದಾಳೆ.
ಎರಡು ವರ್ಷದ ಅವಧಿಯಲ್ಲಿ ಎರಡನೇ ಬಾರಿಗೆ ಉತ್ಖನನದ ಸಮಯದಲ್ಲಿ ಲಕ್ಷಾಂತರ ಮೌಲ್ಯದ ವಜ್ರ ದೊರಕಿದೆ.
ಸತತ ಪರಿಶ್ರಮಕ್ಕೆ ಒಲಿದ ಫಲ
ವಜ್ರ ಕಚೇರಿಯ ಅಧಿಕಾರಿಯ ಪ್ರಕಾರ, ಕಳೆದ ಏಪ್ರಿಲ್ ತಿಂಗಳಲ್ಲಿ ಅಹಿರ್‌ಗಾಂವ್ ಪ್ರದೇಶದಲ್ಲಿ ಉತ್ಖನನ ನಡೆಸಲು ಕಾರ್ಮಿಕ ರಾಕೇಶ್ ಆದಿವಾಸಿ, ಅವರ ಮೂವರು ಸಹೋದರರು ಮತ್ತು ಸಂಬಂಧಿಕರು ಸೇರಿ ಗುತ್ತಿಗೆ ಪಡೆದಿದ್ದರು. ಸತತ ಪ್ರಯತ್ನದ ಬಳಿಕ ಉತ್ಖನನದ ವೇಳೆ ವಜ್ರ ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
2024ರಲ್ಲಿ ₹93 ಲಕ್ಷದ ವಜ್ರ ಪತ್ತೆ
ಈ ಹಿಂದೆಯೂ ಇದೇ ಕುಟುಂಬ ಭಾರಿ ಮೊತ್ತ ವಜ್ರ ಪತ್ತೆ ಹಚ್ಚಿದ್ದರು. 2024ರಲ್ಲಿ 19.22 ಕ್ಯಾರೆಟ್ ವಜ್ರ ದೊರಕಿತ್ತಲ್ಲದೆ ಇದರ ಮೌಲ್ಯ ಬರೋಬ್ಬರಿ ₹93 ಲಕ್ಷ ಆಗಿತ್ತು. ಈಗ ಮತ್ತೆ 11.19 ಕ್ಯಾರೆಟ್ ವಜ್ರ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಇದರ ಅಂದಾಜು ಮೌಲ್ಯ ₹30 ಲಕ್ಷ ಆಗಿದೆ.
ಸುಮಾರು ಎರಡು ತಿಂಗಳ ಪರಿಶ್ರಮದ ಬಳಿಕ ಈ ಕುಟುಂಬಕ್ಕೆ ಅಹಿರ್‌ಗಾಂವ್ ಪ್ರದೇಶದಲ್ಲಿ 11.19 ಕ್ಯಾರೆಟ್‌ನ ಅತ್ಯುತ್ತಮ ಗುಣಮಟ್ಟದ ವಜ್ರ ಸಿಕ್ಕಿದೆ. ಅದನ್ನು ಕುಟುಂಬಸ್ಥರು ಪ್ರಾಮಾಣಿಕವಾಗಿಯೇ ಸರ್ಕಾರಿ ವಜ್ರದ ಕಚೇರಿಗೆ ತಂದು ಒಪ್ಪಿಸಿದ್ದಾರೆ.
ವಜ್ರದ ದೃಢೀಕರಣ
ಪನ್ನಾ ಜಿಲ್ಲೆಯ ವಜ್ರ ತಪಾಸಕ ನೂತನ್ ಜೈನ್ ಅವರು ವಜ್ರದ ತೂಕ ಮತ್ತು ಗುಣಮಟ್ಟವನ್ನು ದೃಢಪಡಿಸಿದ್ದು, ಮುಂದಿನ ಸರ್ಕಾರಿ ಹರಾಜಿನಲ್ಲಿ ಇದನ್ನು ಮಾರಾಟಕ್ಕಿಡಲಾಗುವುದು ಎಂದು ತಿಳಿಸಿದ್ದಾರೆ.
ಈ ವಜ್ರವು 11.19 ಕ್ಯಾರೆಟ್ ಆಗಿದ್ದು, ಉತ್ತಮ ಗುಣಮಟ್ಟದ್ದಾಗಿದೆ. ಇದನ್ನು ಮುಂದಿನ ಸರ್ಕಾರಿ ಹರಾಜಿನಲ್ಲಿ ಮಾರಾಟಕ್ಕೆ ಇಡಲಾಗುವುದು. ನಿಯಮದ ಪ್ರಕಾರ ಸರ್ಕಾರಕ್ಕೆ ಸಲ್ಲಬೇಕಾದ ರಾಯಲ್ಟಿ ಕಡಿತಗೊಳಿಸಿ, ಉಳಿದ ಮೊತ್ತವನ್ನು ನೇರವಾಗಿ ಕುಟುಂಬದ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ ಎಂದು ಜೈನ್ ತಿಳಿಸಿದ್ದಾರೆ.
ಕಾಯಕವೇ ಕೈಲಾಸ...
'ನಾವು ತುಂಬಾ ದಿನಗಳಿಂದ ಉತ್ಖನನದಲ್ಲಿ ಕಷ್ಟಪಡುತ್ತಿದ್ದೇವೆ. ಎರಡು ವರ್ಷಗಳ ಹಿಂದೆ ಸಿಕ್ಕ ₹93 ಲಕ್ಷ ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿತು ನಿಜ. ಆದರೆ, ನಾವೇನೂ ಕೈಕಟ್ಟಿ ಕುಳಿತುಕೊಳ್ಳಲಿಲ್ಲ, ಪರಿಶ್ರಮವನ್ನು ನಿಲ್ಲಿಸಲಿಲ್ಲ' ಎಂದು ರಾಕೇಶ್ ಅವರ ಸಹೋದರ ರಾಜು ಆದಿವಾಸಿ ಹೇಳಿದ್ದಾರೆ.
ಮುಂದಿನ ಯೋಜನೆ...
ಈ ಬಾರಿ ಸಿಗುವ ₹30 ಲಕ್ಷ ರೂಪಾಯಿ ಹಣವನ್ನು ಈ ಕುಟುಂಬ ಏನು ಮಾಡಲಿದೆ ಗೊತ್ತಾ? ಐಷಾರಾಮಿ ಜೀವನ ನಡೆಸುವುದಕ್ಕಲ್ಲ! ಬದಲಿಗೆ, ಈ ಹಣವನ್ನು ಮತ್ತಷ್ಟು ಹೊಸ ಉತ್ಖನನ ಉದ್ಯಮಗಳಲ್ಲಿ ಹೂಡಿಕೆ ಮಾಡಲು ರಾಕೇಶ್ ನಿರ್ಧರಿಸಿದ್ದಾರೆ. ಆ ಮೂಲಕ ತಮ್ಮ ಅದೃಷ್ಟದ ಹುಡುಕಾಟ ಮತ್ತು ಕಠಿಣ ಪರಿಶ್ರಮವನ್ನು ಮುಂದುವರಿಸಲು ಸಜ್ಜಾಗಿದ್ದಾರೆ.
ವಜ್ರದ ನಗರಿ 'ಪನ್ನಾ'
ಮಧ್ಯಪ್ರದೇಶದ ಪನ್ನಾ ಜಿಲ್ಲೆಯು ಜಾಗತಿಕ ಮಟ್ಟದಲ್ಲಿ ತನ್ನ ವಜ್ರದ ನಿಕ್ಷೇಪಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಮಣ್ಣಿನಲ್ಲಿ ವಜ್ರದ ಅಡಗಿದೆ. ಇಲ್ಲಿನ ಸ್ಥಳೀಯ ಕೂಲಿ ಕಾರ್ಮಿಕರು ಮತ್ತು ಬಡ ರೈತರು ಗುತ್ತಿಗೆ ಪಡೆದು ಮಣ್ಣು ಜಾಲಾಡುವ ಕೆಲಸ ಮಾಡುತ್ತಾರೆ. ಹಣೆಬರಹ ಚೆನ್ನಾಗಿದ್ದರೆ ರಾತ್ರೋರಾತ್ರಿ ಬಡವರು ಕೋಟ್ಯಧಿಪತಿಗಳಾದ ಹತ್ತಾರು ರೋಚಕ ಕಥೆಗಳಿಗೆ ಈ ಪನ್ನಾ ಭೂಮಿ ಸಾಕ್ಷಿಯಾಗಿದೆ. ಈಗ ಆದಿವಾಸಿ ಕುಟುಂಬದ ಈ ಯಶೋಗಾಥೆ ಇಡೀ ದೇಶದ ಗಮನ ಸೆಳೆದಿದೆ.
ವಜ್ರಗಳಷ್ಟೇ ಅಲ್ಲದೆ, ಪನ್ನಾ ಜಿಲ್ಲೆಯು ತನ್ನ ಅದ್ಭುತ ಪ್ರಕೃತಿ ಸೌಂದರ್ಯ ಮತ್ತು ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೆಸರುವಾಸಿಯಾಗಿದೆ. ಇಲ್ಲಿನ ಕೆನ್ ನದಿಯು ಕಾಡಿನ ಮಧ್ಯೆ ಹರಿಯುತ್ತದೆ ಮತ್ತು ಇದು ಪ್ರವಾಸಿಗರ ಪ್ರಮುಖ ಆಕರ್ಷಣೆಯಾಗಿದೆ.

