ಕೋಲ್ಕತ್ತ: ಮಹಿಳೆಯರಿಗೆ ಆರ್ಥಿಕ ನೆರವು ನೀಡುವ ಪಶ್ಚಿಮ ಬಂಗಾಳದ ಮಹತ್ವಕಾಂಕ್ಷೆಯ 'ಅನ್ನಪೂರ್ಣ ಯೋಜನೆ'ಗೆ ಅರ್ಜಿ ಸಲ್ಲಿಸಿದ್ದವರ ಪೈಕಿ 26 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ.
ಪೌರತ್ವ ಮತ್ತು ವಾಸ ದೃಢೀಕರಣ ಪ್ರಮಾಣಪತ್ರಗಳಲ್ಲಿನ ಸಂದೇಹಗಳ ಆಧಾರದ ಮೇಲೆ ಈ ಅರ್ಜಿಗಳು ತಿರಸ್ಕೃತವಾಗಿವೆ ಎಂದು ಮುಖ್ಯಮಂತ್ರಿ ಸುವೇಂದು ಅಧಿಕಾರಿ ಹೇಳಿದ್ದಾರೆ.
ಮೊದಲ ಕಂತು ಬಿಡುಗಡೆ: ಈ ಯೋಜನೆಯಡಿ ಮೊದಲ ಕಂತಿನಲ್ಲಿ 1.1 ಕೋಟಿ ಫಲಾನುಭವಿಗಳಿಗೆ ಮೊದಲ ಕಂತಿನ ಹಣವನ್ನು ಮುಖ್ಯಮಂತ್ರಿ ಬುಧವಾರ ವರ್ಗಾಯಿಸಿದರು.
ಒಟ್ಟು 1.6 ಕೋಟಿ ಅರ್ಜಿಗಳು ಸಲ್ಲಿಕೆಯಾಗಿದ್ದವು. ಆ ಪೈಕಿ 26 ಲಕ್ಷ ಅರ್ಜಿಗಳು ತಿರಸ್ಕೃತವಾಗಿವೆ, ಅವುಗಳ ಪರಿಶೀಲನೆ ಅಗತ್ಯವಿದೆ ಎಂದು ಅವರು ಮಾಹಿತಿ ನೀಡಿದರು.
'ತೆರಿಗೆದಾರರ ಹಣವನ್ನು ಭಾರತೀಯರಲ್ಲದವರಿಗೆ ವರ್ಗಾಯಿಸಲು ಸಾಧ್ಯವಿಲ್ಲ' ಎಂದ ಅವರು 26 ಲಕ್ಷ ಅನ್ನಪೂರ್ಣ ಯೋಜನೆ ಅರ್ಜಿಗಳನ್ನು ತಿರಸ್ಕರಿಸಿದ್ದನ್ನು ಸಮರ್ಥಿಸಿಕೊಂಡರು.
ಅರ್ಹ ಫಲಾನುಭವಿಗಳನ್ನು ಗುರುತಿಸಿ, ಅವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಲಾಗಿದೆ ಎಂದು ಅವರು ವಿವರಿಸಿದರು.
ಹಿಂದಿನ ಟಿಎಂಸಿ ಆಡಳಿತದಲ್ಲಿದ್ದ 'ಲಕ್ಷ್ಮಿರ್ ಭಂಡಾರ್' ಕಾರ್ಯಕ್ರಮವನ್ನು ಬದಲಿಸಿ, ಅರ್ಹ ಮಹಿಳೆಯರಿಗೆ ಮಾಸಿಕ ₹3,000 ಭತ್ಯೆ ಒದಗಿಸುವ ಅನ್ನಪೂರ್ಣ ಯೋಜನೆಯನ್ನು ಪಶ್ಚಿಮ ಬಂಗಾಳದ ಬಿಜೆಪಿ ಸರ್ಕಾರ ಪರಿಚಯಿಸಿದೆ.

