ನವದೆಹಲಿ: ರಾಜಸ್ತಾನ ಮೂಲದ ಪ್ರಥಮ್ ಭಲ್ಲಾ ಅವರ ಸಮಾಜ ಸೇವೆಯನ್ನು ಗುರುತಿಸಿ, ಬ್ರಿಟನ್‌ನ 'ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್' ವಿಶ್ವ ದಾಖಲೆಯ ಗೌರವ ಸಲ್ಲಿಸಿದೆ.
ಜೈಪುರ ನಿವಾಸಿಯಾಗಿರುವ ಪ್ರಥಮ್ ಅವರು ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದರು.
ಸಾರ್ವಜನಿಕ ವಲಯದಲ್ಲಿ ಅವರು ಉತ್ತಮ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದರು. ಮೂಲಭೂತ ಸೌಕರ್ಯ ಸೇರಿ ಹಲವು ಸಮಸ್ಯೆಗಳ ವಿರುದ್ಧ ಧ್ವನಿ ಎತ್ತುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಪ್ರಥಮ್ ಭಲ್ಲಾ, 'ಯುಕೆ ಸಂಸತ್ತಿನಲ್ಲಿ ಈ ಮನ್ನಣೆಯನ್ನು ಪಡೆದಿರುವುದು ನನಗೆ ತುಂಬಾ ಖುಷಿ ಇದೆ. ನನ್ನ ಕೆಲಸವನ್ನು ಗುರುತಿಸಿರುವುದಕ್ಕೆ ಹಾಗೂ ಈ ಪ್ರತಿಷ್ಠಿತ ಮನ್ನಣೆಗೆ ನಾನು ಅರ್ಹನೆಂದು ಪರಿಗಣಿಸಿರುವುದಕ್ಕೆ ಕೃತಜ್ಞತೆ ತಿಳಿಸುತ್ತೇನೆ. ಈ ಗೌರವ ನನಗೆ ಸಮಾಜ ಸೇವೆ ಮುಂದುವರಿಸಲು ಇನ್ನಷ್ಟು ಪ್ರೇರೇಪಿಸುತ್ತದೆ' ಎಂದು ಹೇಳಿಕೊಂಡಿದ್ದಾರೆ.
ಪ್ರಥಮ್ ಭಲ್ಲಾ ಅವರು ರಾಜಸ್ಥಾನ ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ಪದವಿ ಪಡೆದುಕೊಂಡಿದ್ದಾರೆ.

