ಇವಿ ಚಾರ್ಜಿಂಗ್ ಮತ್ತು ಇಂಧನ ನಿರ್ವಹಣಾ ಸಂಸ್ಥೆಯಾದ Kazam ಹಾಗೂ Alliance for an Energy Efficient Economy (AEEE) ಜಂಟಿಯಾಗಿ ಸಿದ್ಧಪಡಿಸಿರುವ 'ದಿ ನೆಟ್-ಝೀರೋ ಟ್ರಾನ್ಸಿಶನ್ ಸ್ಟಾರ್ಟ್ಸ್ ಅಟ್ ಹೋಮ್: ಎನೇಬಲಿಂಗ್ ಇವಿ-ರೆಡಿ ರೆಸಿಡೆನ್ಸಸ್ ಇನ್ ಇಂಡಿಯಾ' ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಟೈಯರ್-1, ಟೈಯರ್-2 ಮತ್ತು ಟೈಯರ್-3 ನಗರಗಳಲ್ಲಿನ 80,000ಕ್ಕೂ ಹೆಚ್ಚು ವಸತಿ ಇವಿ ಚಾರ್ಜರ್‌ಗಳ ಅಳವಡಿಕೆಗೆ ಸಂಬಂಧಿಸಿದ ದತ್ತಾಂಶವನ್ನು ಆಧರಿಸಿ ಈ ಅಧ್ಯಯನ ನಡೆಸಲಾಗಿದೆ. ಸ್ವತಂತ್ರ ಮನೆಗಳು, ಅಪಾರ್ಟ್‌ಮೆಂಟ್‌ಗಳು, ಅನೌಪಚಾರಿಕ ವಸಾಹತುಗಳು ಮತ್ತು ಬಾಡಿಗೆ ಮನೆಗಳ ಮಾಹಿತಿಯನ್ನು ಇದರಲ್ಲಿ ಒಳಗೊಂಡಿದೆ.
ಭಾರತದಲ್ಲಿ ವಿದ್ಯುತ್ ವಾಹನಗಳ ಬಳಕೆ ಹೆಚ್ಚುತ್ತಿದೆಯಾದರೂ, ಮನೆಗಳಲ್ಲಿ ಸುರಕ್ಷಿತ ಚಾರ್ಜಿಂಗ್ ಸೌಲಭ್ಯಗಳು ಇನ್ನೂ ಸಮರ್ಪಕವಾಗಿ ಲಭ್ಯವಿಲ್ಲ ಎಂದು ವರದಿ ತಿಳಿಸಿದೆ. ಪ್ರಸ್ತುತ, ಇವಿ ಖರೀದಿಸಲು ಮುಂದಾಗುವವರಲ್ಲಿ ಕೇವಲ ಶೇ.55ರಷ್ಟು ಮಂದಿಗೆ ಮಾತ್ರ ಮನೆ ಚಾರ್ಜಿಂಗ್ ಸೌಲಭ್ಯ ಲಭ್ಯವಿದೆ ಎಂದು ಅದು ಹೇಳಿದೆ.
2024ರಲ್ಲಿ ದೇಶದ ಒಟ್ಟು ವಿದ್ಯುತ್ ಬಳಕೆಯಲ್ಲಿ ಇವಿಗಳ ಪಾಲು ಶೇ.0.2ರಷ್ಟಿದ್ದು, 2035ರ ವೇಳೆಗೆ ಅದು ಶೇ.6ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ ಎಂದು ವರದಿ ತಿಳಿಸಿದೆ.
ವಿದ್ಯುತ್ ಮೂಲಸೌಕರ್ಯದ ಕೊರತೆ ಮತ್ತು ವೆಚ್ಚದ ಕಾರಣದಿಂದ ಅನೇಕರು ಸಾಮಾನ್ಯ ಪ್ಲಗ್ ಪಾಯಿಂಟ್‌ಗಳು, ತಾತ್ಕಾಲಿಕ ತಂತಿ ಸಂಪರ್ಕಗಳು ಹಾಗೂ ಇವಿ ಚಾರ್ಜಿಂಗ್‌ಗೆ ಸೂಕ್ತವಲ್ಲದ ವಿದ್ಯುತ್ ಸಂಪರ್ಕಗಳನ್ನು ಬಳಸುತ್ತಿದ್ದಾರೆ. ಇದರಿಂದ ಬೆಂಕಿ ಅವಘಡ ಮತ್ತು ವಿದ್ಯುತ್ ಸುರಕ್ಷತೆಗೆ ಸಂಬಂಧಿಸಿದ ಅಪಾಯಗಳು ಎದುರಾಗಬಹುದು ಎಂದು ವರದಿ ಎಚ್ಚರಿಸಿದೆ.
ಇಂತಹ ಸಮಸ್ಯೆಗಳನ್ನು ತಪ್ಪಿಸಲು, ಇವಿ ಚಾರ್ಜಿಂಗ್‌ಗಾಗಿ ಪ್ರತ್ಯೇಕ ವಿದ್ಯುತ್ ಸರ್ಕ್ಯೂಟ್, ಸಾಕಷ್ಟು ವಿದ್ಯುತ್ ಸಾಮರ್ಥ್ಯ, ಸುರಕ್ಷಿತ ವೈರಿಂಗ್ ಮತ್ತು ಅರ್ಥಿಂಗ್ ವ್ಯವಸ್ಥೆ ಹಾಗೂ ಸೂಕ್ತ ರಕ್ಷಣಾ ಸಾಧನಗಳನ್ನು ಅಳವಡಿಸಬೇಕು ಎಂದು ವರದಿ ಶಿಫಾರಸು ಮಾಡಿದೆ.

