ಅಹಮದಾಬಾದ್: ಏರ್ ಇಂಡಿಯಾ ಎಐ-171 ವಿಮಾನ ದುರಂತದ ತನಿಖೆಯ ಬಗ್ಗೆ ನಿಯಮಿತವಾಗಿ ಮಾಹಿತಿ ನೀಡಬೇಕು, ಸ್ವತಂತ್ರ ಸಿಮ್ಯುಲೇಟರ್ ಪರೀಕ್ಷೆಗಳನ್ನು ನಡೆಸಬೇಕು ಹಾಗೂ ತನಿಖಾ ತಂಡದಲ್ಲಿ ಬೋಯಿಂಗ್ 787 ವಿಮಾನ ಹಾರಾಟದ ಅನುಭವ ಹೊಂದಿರುವ ಪೈಲಟ್ ರನ್ನು ಸೇರ್ಪಡೆ ಮಾಡಬೇಕು ಎಂದು ದುರಂತದಲ್ಲಿ ಮೃತಪಟ್ಟವರ ಕುಟುಂಬಗಳು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಪು ರಾಮ್ ಮೋಹನ್ ನಾಯ್ಡು ಅವರಿಗೆ ಮನವಿ ಸಲ್ಲಿಸಿವೆ.
ಅಲ್ಲದೆ, ಏರ್ ಇಂಡಿಯಾ ಬಿಡುಗಡೆ ಮಾಡಿರುವ ಪರಿಹಾರಕ್ಕೆ ಸಂಬಂಧಿಸಿದ ದಾಖಲೆಗಳ ಕುರಿತು ಕಳವಳ ವ್ಯಕ್ತಪಡಿಸಿರುವ ಕುಟುಂಬಗಳು, ಆ ದಾಖಲೆಗಳ ಬಗ್ಗೆ ಸ್ಪಷ್ಟನೆ ನೀಡುವಂತೆ ಕೋರಿವೆ.
ಅಂತಿಮ ತನಿಖಾ ವರದಿಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಿ, ಸಾಧ್ಯವಾದಷ್ಟು ಶೀಘ್ರ ಸಾರ್ವಜನಿಕಗೊಳಿಸುವುದನ್ನು ಖಾತರಿಪಡಿಸಬೇಕು ಎಂದು ನಾಗರಿಕ ವಿಮಾನಯಾನ ಸಚಿವಾಲಯವನ್ನು ಕುಟುಂಬಗಳು ಒತ್ತಾಯಿಸಿವೆ.
ಸುಮಾರು 30 ಕುಟುಂಬಗಳ ಸಹಿಯನ್ನು ಒಳಗೊಂಡಿರುವ ಈ ಪತ್ರವನ್ನು ರವಿವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ. ವಿಮಾನ ಅಪಘಾತ ತನಿಖಾ ದಳ (ಎಎಐಬಿ) ನಡೆಸುತ್ತಿರುವ ತನಿಖೆಯು ನ್ಯಾಯಯುತ, ಪಾರದರ್ಶಕ ಹಾಗೂ ಕಾಲಮಿತಿಯೊಳಗೆ ನಡೆಯುವುದನ್ನು ಖಾತರಿಪಡಿಸಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಅಲ್ಲದೆ, ಅಪಘಾತದ ಕಾರಣಗಳನ್ನು ನಿರ್ಧರಿಸುವಲ್ಲಿ ಯಾವುದೇ ಸಂದೇಹಗಳಿಗೆ ಅವಕಾಶವಾಗದಂತೆ ಸ್ವತಂತ್ರ ಸಿಮ್ಯುಲೇಟರ್ ಪರೀಕ್ಷೆಗಳನ್ನು ನಡೆಸಬೇಕು. ತನಿಖಾ ತಂಡದಲ್ಲಿ ಬೋಯಿಂಗ್ 787 ವಿಮಾನ ಹಾರಾಟದ ಅನುಭವ ಹೊಂದಿರುವ ಪೈಲಟ್‌ರನ್ನು ಸೇರಿಸಬೇಕು. ತನಿಖೆಯ ಪ್ರಗತಿಯ ಬಗ್ಗೆ ಸಂತ್ರಸ್ತರ ಕುಟುಂಬಗಳಿಗೆ ನಿಯಮಿತವಾಗಿ ಮಾಹಿತಿ ನೀಡಬೇಕು ಎಂದು ಕುಟುಂಬಗಳು ಮನವಿಯಲ್ಲಿ ತಿಳಿಸಿವೆ.
ಜೂನ್ 12, 2025ರಂದು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್‌ಆಫ್ ಆದ ಕೆಲವೇ ಕ್ಷಣಗಳಲ್ಲಿ ಲಂಡನ್‌ನತ್ತ ತೆರಳುತ್ತಿದ್ದ ಏರ್ ಇಂಡಿಯಾ ಎಐ-171 ವಿಮಾನ ಪತನಗೊಂಡಿತ್ತು. ಈ ಭೀಕರ ದುರಂತದಲ್ಲಿ ವಿಮಾನದಲ್ಲಿದ್ದ 242 ಮಂದಿಯಲ್ಲಿ 241 ಮಂದಿ ಮೃತಪಟ್ಟಿದ್ದರು. ವಿಮಾನ ವೈದ್ಯರ ವಸತಿ ನಿಲಯದ ಮೇಲೆ ಬಿದ್ದ ಪರಿಣಾಮ ಅಲ್ಲಿದ್ದ 19 ಮಂದಿಯೂ ಸಾವಿಗೀಡಾಗಿದ್ದು, ಒಟ್ಟು 260 ಮಂದಿ ಜೀವ ಕಳೆದುಕೊಂಡಿದ್ದರು. ಇದು ಭಾರತದಲ್ಲಿ ಇತ್ತೀಚಿನ ದಶಕಗಳಲ್ಲಿ ಸಂಭವಿಸಿದ ಅತ್ಯಂತ ಭೀಕರ ವೈಮಾನಿಕ ದುರಂತಗಳಲ್ಲಿ ಒಂದಾಗಿದೆ.

