ನವದೆಹಲಿ: ಅಯೋಧ್ಯೆಯ ರಾಮದೇವಾಲಯದಲ್ಲಿ ದೇಣಿಗೆ ಕಳವು ಪ್ರಕರಣದಲ್ಲಿ ಶಾಮೀಲಾಗಿರುವವರ ವಿರುದ್ಧ ಕಠಿಣ ಕ್ರಮವನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ರಾಷ್ಟ್ರವ್ಯಾಪಿ ಆಂದೋಲನವನ್ನು ನಡೆಸುವುದಾಗಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ರವಿವಾರ ಘೋಷಿಸಿದ್ದಾರೆ.
ದಿಲ್ಲಿಯ ರೋಹಿಣಿ ಪ್ರದೇಶದಲ್ಲಿರುವ ಜಪಾನೀಸ್ ಪಾರ್ಕ್‌ನಲ್ಲಿ ಪಕ್ಷವು ಆಯೋಜಿಸಿದ ರಾಮಾಯಣ ಮಹಾಕಾವ್ಯದ 'ಸುಂದರಕಾಂಡ ' ಅಧ್ಯಾಯದ ಪಠಣ ಕಾರ್ಯಕ್ರಮದಲ್ಲಿ ಕೇಜ್ರಿವಾಲ್ ಈ ಘೋಷಣೆ ಮಾಡಿದರು.
ಇದಕ್ಕೂ ಮುನ್ನ ಕೇಜ್ರಿವಾಲ್ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ ಸಂದೇಶದಲ್ಲಿ, ಅಯೋಧ್ಯೆ ದೇವಾಲಯದ ದೇಣಿಗೆ ಕಳವು ಪ್ರಕರಣದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಕೋರಿ ಪ್ರಾರ್ಥನೆಗಳನ್ನು ಸಲ್ಲಿಸಲಾಗುವುದು ಎಂದರು.
ಈ ಕೃತ್ಯದ ಹೊಣೆಗಾರರ ವಿರುದ್ಧ ಕಠಿಣ ಶಿಕ್ಷೆಯಾಗಬೇಕೆಂಬ ಬೇಡಿಕೆಗೆ ಸಾರ್ವಜನಿಕ ಬೆಂಬಲವನ್ನು ಒಗ್ಗೂಡಿಸುವ ಉದ್ದೇಶದಿಂದ ಈ ಅಭಿಯಾನವನ್ನು ಹಮ್ಮಿಕೊಂಡಿರುವುದಾಗಿ ಅವರು ಹೇಳಿದ್ದಾರೆ. ಸುಂದರಕಾಂಡ ಪಠಣದ ಬೆನ್ನಲ್ಲೇ ಸಹಿಸಂಗ್ರಹ ಅಭಿಯಾನ ಆರಂಭಗೊಳ್ಳಲಿದೆಯೆಂದವರು ಹೇಳಿದ್ದಾರೆ.
ಆಪ್ ಪಕ್ಷದ ಅಭಿಯಾನವನ್ನು ಬಿಜೆಪಿ ಟೀಕಿಸಿದ್ದು, ಇದೊಂದು ರಾಜಕೀಯ ಪ್ರೇರಿತ ಕಾರ್ಯಕ್ರಮವೆಂದು ಖಂಡಿಸಿದೆ. ತಮ್ಮ ರಾಜಕೀಯ ವರ್ಚಸ್ಸನ್ನು ವೃದ್ಧಿಸಲು ಕೇಜ್ರಿವಾಲ್ ಅವರು ಇಂತಹ ಗಿಮಿಕ್‌ಗಳನ್ನು ಮಾಡುತ್ತಿದ್ದಾರೆಂದು ದಿಲ್ಲಿ ಬಿಜೆಪಿ ಅಧ್ಯಕ್ಷ ಹರ್ಷ ಮಲ್ಹೋತ್ರಾ ಆಪಾದಿಸಿದ್ದಾರೆ.

