ನವದೆಹಲಿ: ಅಯೋಧ್ಯೆಯ ರಾಮಮಂದಿರ ದೇಣಿಗೆ ಕಳ್ಳತನದ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ದೇಶದಾದ್ಯಂತ ಸಹಿ ಸಂಗ್ರಹ ಅಭಿಯಾನವನ್ನು ಪ್ರಾರಂಭಿಸಲಾಗುವುದು ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ಭಾನುವಾರ ಘೋಷಿಸಿದ್ದಾರೆ.
ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ನಮ್ಮ ಪಕ್ಷದಿಂದ ಸುಂದರಕಾಂಡ ಪಾರಾಯಣ ಧಾರ್ಮಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಇದರ ನಂತರ ಸಹಿ ಸಂಗ್ರಹ ಅಭಿಯಾನವನ್ನು ಪ್ರಾರಂಭ ಮಾಡಲಿದ್ದೇವೆ' ಎಂದು ಹೇಳಿದ್ದಾರೆ.
'ರಾಮಮಂದಿರದಲ್ಲಿ ದೇಣಿಗೆ ಕಳ್ಳತನ ಮಾಡಿದವರಿಗೆ ಕಠಿಣ ಶಿಕ್ಷೆಯಾಗಲಿ ಎಂದು ನಾವು ಹನುಮಂತನಲ್ಲಿ ಪ್ರಾರ್ಥಿಸುತ್ತೇವೆ ಮತ್ತು ಹನುಮಂತನ ಆಶೀರ್ವಾದದೊಂದಿಗೆ ದೇಶದಾದ್ಯಂತ ಸಹಿ ಸಂಗ್ರಹ ಅಭಿಯಾನವನ್ನು ಹಮ್ಮಿಕೊಳ್ಳಲಿದ್ದೇವೆ' ಎಂದು ತಿಳಿಸಿದ್ದಾರೆ.
ಏತನ್ಮಧ್ಯೆ, ಸುಂದರಕಾಂಡ ಪಾರಾಯಣ ಕಾರ್ಯಕ್ರಮವನ್ನು ಟೀಕಿಸಿರುವ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಹರ್ಷ್ ಮಲ್ಹೋತ್ರಾ, ಇದೊಂದು ರಾಜಕೀಯ ಗಿಮಿಕ್ ಎಂದು ಆರೋಪಿಸಿದ್ದಾರೆ.
'ಮುಂದಿನ ವರ್ಷ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಿದ್ದು, ಮತದಾರರನ್ನು ತಮ್ಮ ಪಕ್ಷದ ಕಡೆಗೆ ಸೆಳೆಯಲು ಕೇಜ್ರಿವಾಲ್ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ' ಎಂದು ಕಿಡಿಕಾರಿದ್ದಾರೆ.
'ಎಎಪಿ ಅಧಿಕಾರದಲ್ಲಿದ್ದಾಗ ಸುಂದರಕಾಂಡ ಪಾರಾಯಣ ಕಾರ್ಯಕ್ರಮವನ್ನು ಘೋಷಿಸಿ ನಂತರ ರದ್ದುಪಡಿಸಿತ್ತು. ಆಗ ರದ್ದುಪಡಿಸಲು ಕಾರಣವೇನು?' ಎಂದು ಪ್ರಶ್ನಿಸಿದ್ದಾರೆ.
2024ರಲ್ಲಿ ದೆಹಲಿಯ ಎಲ್ಲಾ 70 ವಿಧಾನಸಭಾ ಕ್ಷೇತ್ರಗಳಲ್ಲಿ ಸಾಪ್ತಾಹಿಕ ಸುಂದರಕಾಂಡ ಪಾರಾಯಣ ಕಾರ್ಯಕ್ರಮವನ್ನು ಎಎಪಿ ಸರ್ಕಾರ ಘೋಷಿಸಿತ್ತು. ನಂತರ ಈ ಕಾರ್ಯಕ್ರಮವನ್ನು ರದ್ದುಗೊಳಿಸಿತ್ತು.
ಸುಂದರಕಾಂಡ ಪಾರಾಯಣ ಎಂದರೆ?
ಸುಂದರಕಾಂಡ ಪಾರಾಯಣವು ವಾಲ್ಮೀಕಿ ರಾಮಾಯಣದ ಅತ್ಯಂತ ಪವಿತ್ರವಾದ ಅಧ್ಯಾಯವಾಗಿದೆ. ಇದು ಹನುಮಂತನ ಲಂಕಾ ಪ್ರಯಾಣ, ಸೀತಾ ದರ್ಶನ ಮತ್ತು ಲಂಕಾ ದಹನದ ಅದ್ಭುತ ಕಥೆಯನ್ನು ಒಳಗೊಂಡಿದೆ. ಇದನ್ನು ಶ್ರದ್ಧೆ, ಭಕ್ತಿಯಿಂದ ಪಾರಾಯಣ ಮಾಡುವುದರಿಂದ ಸಕಲ ಕಷ್ಟಗಳು ದೂರವಾಗಿ, ಮಾನಸಿಕ ಶಾಂತಿ ಸಿಗುತ್ತದೆ ಎಂಬ ನಂಬಿಕೆಯಿದೆ.

