ನವದೆಹಲಿ (PTI): ಅಮೆರಿಕದ ಜೊತೆ ವ್ಯಾಪಾರ ಕುರಿತಾಗಿ ಇರುವ ಸಮಸ್ಯೆಗಳನ್ನು ದ್ವಿಪಕ್ಷೀಯ ಮಾತುಕತೆಗಳ ಮೂಲಕ ಬಗೆಹರಿಸಿಕೊಳ್ಳಬಹುದು, ಅದಕ್ಕೆ ಏಕಪಕ್ಷೀಯವಾಗಿಕ್ರಮ ತೆಗೆದುಕೊಳ್ಳುವ ಅಗತ್ಯ ಇಲ್ಲ ಎಂಬುದಾಗಿ ಭಾರತವು ಪುನರುಚ್ಚರಿಸಿದೆ.
ಹೀಗಾಗಿ, ಅಮೆರಿಕದ ವ್ಯಾಪಾರ ಪ್ರತಿನಿಧಿ ಸಂಸ್ಥೆಯು (ಯುಎಸ್‌ಟಿಆರ್) ಭಾರತದ ಮೇಲೆ ಹೆಚ್ಚುವರಿಯಾಗಿ ಶೇ 12.5ರಷ್ಟು ಸುಂಕ ವಿಧಿಸಲು ಪ್ರಸ್ತಾವ ಸಿದ್ಧಪಡಿಸಿರುವುದನ್ನು ಮರುಪರಿಶೀಲನೆ ಮಾಡಬೇಕು ಎಂದು ಒತ್ತಾಯಿಸಿದೆ.
ಬಲವಂತದಿಂದ ಕಾರ್ಮಿಕರನ್ನು ದುಡಿಸಿಕೊಳ್ಳುವ ಕಡೆಗಳಿಂದ ಸರಕುಗಳನ್ನು ಆಮದು ಮಾಡಿಕೊಳ್ಳುವುದಕ್ಕೆ ನಿಷೇಧ ಹೇರಲು ವಿಫಲವಾಗಿರುವ ಆರೋಪದ ಅಡಿಯಲ್ಲಿ ಭಾರತದ ಸರಕುಗಳ ಮೇಲೆ ಶೇ 12.5ರಷ್ಟು ಸುಂಕ ವಿಧಿಸಲು ಅಮೆರಿಕ ಪ್ರಸ್ತಾವ ಸಿದ್ಧಪಡಿಸಿದೆ.
ಭಾರತ ಅಲ್ಲದೆ ಇತರ 53 ದೇಶಗಳ ಮೇಲೆಯೂ ಇದೇ ಬಗೆಯಲ್ಲಿ ಸುಂಕ ವಿಧಿಸುವ ಪ್ರಸ್ತಾವ ಅಮೆರಿಕದ ಮುಂದಿದೆ. ಅಮೆರಿಕದ ವ್ಯಾಪಾರ ಪ್ರತಿನಿಧಿ (ಯುಎಸ್‌ಟಿಆರ್) ಸಂಸ್ಥೆ, 1974ರ ವ್ಯಾಪಾರ ಕಾಯ್ದೆಯ ಅಡಿ ಈ ಹೆಚ್ಚುವರಿ ಸುಂಕ ವಿಧಿಸುವ ಪ್ರಸ್ತಾವನೆ ಸಿದ್ಧಪಡಿಸಿದೆ.
ಇದಕ್ಕೆ ಸಂಬಂಧಿಸಿದ ವಿಚಾರಣೆಗೆ ಹಾಜರಾಗಿದ್ದ ಕೇಂದ್ರ ವಾಣಿಜ್ಯ ಇಲಾಖೆಯ ಜಂಟಿ ಕಾರ್ಯದರ್ಶಿ ಬ್ರಿಜ್ ಮೋಹನ್ ಮಿಶ್ರಾ ಅವರು, ಬಲವಂತದಿಂದ ಕಾರ್ಮಿಕರನ್ನು ದುಡಿಸಿಕೊಳ್ಳುವ ವಿಚಾರದಲ್ಲಿ ಭಾರತವು ನೈಜ ಕಳಕಳಿಯನ್ನು ಹೊಂದಿರುವ ಹಿನ್ನೆಲೆಯಲ್ಲಿ, ಯುಎಸ್‌ಟಿಆರ್ ಇರಿಸಿರುವ ಹೆಜ್ಜೆಯು ಕಳವಳಕಾರಿ ಆಗಿದೆ ಎಂದು ಹೇಳಿದ್ದಾರೆ. ಯುಎಸ್‌ಟಿಆರ್ ತನ್ನ ಪ್ರಸ್ತಾವವನ್ನುಮರುಪರಿಶೀಲಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬಲವಂತದಿಂದ ಕಾರ್ಮಿಕರನ್ನು ದುಡಿಸಿಕೊಳ್ಳುವ ಚಾಳಿಯನ್ನು ತೊಡೆಯುವುದನ್ನು ಭಾರತವು ಗಂಭೀರವಾಗಿ ಹಾಗೂ ಸಾಂವಿಧಾನಿಕ ಹೊಣೆಯನ್ನಾಗಿ ಪರಿಗಣಿಸುತ್ತದೆ ಎಂದು ಮಿಶ್ರಾ ಹೇಳಿದ್ದಾರೆ. ವಿಚಾರಣೆಯು ಜುಲೈ 8ರಂದು ನಡೆದಿದೆ, ಅದಕ್ಕೆ ಸಂಬಂಧಿಸಿದ ವಿವರಗಳನ್ನು ಯುಎಸ್‌ಟಿಆರ್ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಯುಎಸ್‌ಟಿಆರ್ ಪ್ರಸ್ತಾವನೆಯು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಅದು ಕಾರ್ಯರೂಪಕ್ಕೆ ಬರುವ ಮೊದಲು, ಸುಂಕಕ್ಕೆ ಸಂಬಂಧಿಸಿದಂತೆ ಭಾರತದ ವಾದವನ್ನು ಪರಿಗಣಿಸುತ್ತದೆ.

