ನವದೆಹಲಿ: ಚುನಾವಣಾ ಆಯೋಗವು ದೇಶದ ಸಂವಿಧಾನ, ಚುನಾವಣಾ ಕಾಯ್ದೆ, ಲಿಖಿತ ನಿಯಮಕ್ಕೆ ಬದ್ಧವಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಶುಕ್ರವಾರ ತಿಳಿಸಿದ್ದಾರೆ.
ಚುನಾವಣಾ ಆಯೋಗವು ತಾರತಮ್ಮ ಎಸಗುತ್ತಿದೆ ಎಂಬ ವಿರೋಧ ಪಕ್ಷಗಳ ಆರೋಪಕ್ಕೆ ಉತ್ತರಿಸಿರುವ ಜ್ಞಾನೇಶ್ ಕುಮಾರ್, ಆಯೋಗದ ಎಲ್ಲ ಕ್ರಮಗಳು ಪಾರದರ್ಶಕವಾಗಿ ನಡೆಯುತ್ತದೆ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಡಲಾಗುವ ಸುಳ್ಳು ವದಂತಿಗಳ ಕುರಿತು ಅಧಿಕಾರಿಗಳು ಎಚ್ಚರದಿಂದಿರಬೇಕು ಎಂದು ಅವರು ಎಚ್ಚರಿಸಿದ್ದಾರೆ. ಅಂತಹ ತಪ್ಪು ಮಾಹಿತಿ ಹಾಗೂ ವದಂತಿಗಳು ಹರಡುವುದನ್ನು ತಡೆಯಲು ಅಧಿಕಾರಿಗಳು ಹೆಚ್ಚು ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಹೇಳಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಗಳಲ್ಲಿ ದಾಖಲೆಯ ಪ್ರಮಾಣದ ಮತದಾನವಾಗಿರುವುದು, ದೇಶದ ಜನತೆಗೆ ಚುನಾವಣಾ ಪ್ರಕ್ರಿಯೆಯ ಮೇಲಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಅವರು ಉಲ್ಲೇಖಿಸಿದ್ದಾರೆ.

