ನವದೆಹಲಿ: 'ಅಯೋಧ್ಯೆ ರಾಮಮಂದಿರದಲ್ಲಿ ನಡೆದ ಕಾಣಿಕೆ ಕಳ್ಳತನವು ಭಕ್ತರ ಭಾವನೆ ಮತ್ತು ನಂಬಿಕೆಗೆ ತೀವ್ರ ಧಕ್ಕೆ ತಂದಿದೆ' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಶುಕ್ರವಾರ ಹೇಳಿದರು.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಘಟನೆಯನ್ನು ದುರದೃಷ್ಟಕರ ಎಂದು ಕರೆದರು.
'ಅಯೋಧ್ಯೆ ರಾಮಮಂದಿರದಲ್ಲಿ ನಡೆದಿರುವ ಘಟನೆಯು ಇಡೀ ಸಮಾಜ ಹಾಗೂ ರಾಮಭಕ್ತರ ನಂಬಿಕೆಗೆ ತೀವ್ರ ಧಕ್ಕೆ ತಂದಿದೆ. ಈ ಘಟನೆಯು ತೀವ್ರ ನೋವುಂಟು ಮಾಡಿದೆ' ಎಂದರು.
'ಕೋಟಿಗಟ್ಟಲೆ ರಾಮಭಕ್ತರ ನಂಬಿಕೆ ಮುರಿಯದಂತೆ ಮಾಡುವುದು ಇಂದಿನ ತುರ್ತಾಗಿದೆ. ಪ್ರಸ್ತುತ ಇರುವ ಗೊಂದಲ ಮತ್ತು ಅನಿಶ್ಚಿತತೆಯ ಸ್ಥಿತಿಯು ಆದಷ್ಟು ಬೇಗ ಕೊನೆಗೊಳ್ಳಬೇಕು. ಈ ನಿಟ್ಟಿನಲ್ಲಿ ವಿಶೇಷ ತನಿಖಾ ತಂಡ ಮತ್ತು ಮಂದಿರದ ಆಡಳಿತ ಮಂಡಳಿ ಅಗತ್ಯ ಕ್ರಮಕೈಗೊಳ್ಳುತ್ತದೆ ಎಂಬ ನಿರೀಕ್ಷೆಯಿದೆ' ಎಂದರು.
'ಹಣಕಾಸು ನಿರ್ವಹಣೆಯಲ್ಲಿ ಪಾರದರ್ಶಕತೆ ತರುವ ಮೂಲಕ ರಾಮ ಜನ್ಮಭೂಮಿ ಟ್ರಸ್ಟ್ ಹಿಂದೂ ಸಮಾಜದ ನಂಬಿಕೆ ಮತ್ತು ವಿಶ್ವಾಸವನ್ನು ಬಲಪಡಿಸುವುದನ್ನು ಮುಂದುವರಿಸುತ್ತದೆ ಎಂಬ ವಿಶ್ವಾಸ ನಮಗಿದೆ' ಎಂದು ಹೇಳಿದರು.
ರಾಮಮಂದಿರ ದೇಣಿಗೆ ದುರುಪಯೋಗಕ್ಕೆ ಸಂಬಂಧಿಸಿದಂತೆ ಈವರೆಗೆ 8 ಜನರನ್ನು ಬಂಧಿಸಲಾಗಿದ್ದು, ಬಂಧಿತರ ಪೈಕಿ ಆರು ಜನರಿಂದ ₹80 ಲಕ್ಷ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹಿಂದೂ ವಿರೋಧಿಗಳನ್ನು ಮಟ್ಟ ಹಾಕಿ: ಹೊಸಬಾಳೆ ಕರೆ
ಈ ಕಷ್ಟದ ಸಮಯದಲ್ಲಿ ಇಡೀ ಹಿಂದೂ ಸಮಾಜವು ತಾಳ್ಮೆ ಮತ್ತು ಸಂಯಮವನ್ನು ತಂದುಕೊಳ್ಳಬೇಕು ಎಂದು ಆರ್‌ಎಸ್‌ಎಸ್ ಕರೆ ನೀಡುತ್ತದೆ ಎಂದು ಹೊಸಬಾಳೆ ಹೇಳಿದ್ದಾರೆ.
'ಈ ದುರದೃಷ್ಟಕರ ಘಟನೆಯನ್ನು ಬಳಸಿಕೊಂಡು ಹಿಂದೂ ಧರ್ಮ ಮತ್ತು ಸಮಾಜವನ್ನು ದೂಷಿಸಲು ಪ್ರಯತ್ನಿಸುತ್ತಿರುವ ಹಿಂದೂ ವಿರೋಧಿ ಮತ್ತು ರಾಷ್ಟ್ರ ವಿರೋಧಿ ಶಕ್ತಿಗಳ ಪಿತೂರಿಗಳನ್ನು ಮಟ್ಟಹಾಕಬೇಕು' ಎಂದು ಅವರು ಹೇಳಿದ್ದಾರೆ.

