ಟೆಹರಾನ್: ಪಶ್ಚಿಮ ಏಷ್ಯಾದಲ್ಲಿ ಇಸ್ರೇಲ್ ನಡೆಸುತ್ತಿರುವ ದಾಳಿ ಮತ್ತು ಅದಕ್ಕೆ ಅಮೆರಿಕ ನೀಡುತ್ತಿರುವ ಬೆಂಬಲವನ್ನು ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ತೀವ್ರವಾಗಿ ಖಂಡಿಸಿದ್ದು, 'ಅಂತರಾಷ್ಟ್ರೀಯ ಸಂಸ್ಥೆಗಳು ಏಕೆ ಮೌನ ವಹಿಸುತ್ತಿವೆ' ಎಂದು ಅವರು ಪ್ರಶ್ನಿಸಿದ್ದಾರೆ.
ಈ ಸಂಬಂಧ 'ಇಸ್ಲಾಮಿಕ್ ರಿಪಬ್ಲಿಕ್ ನ್ಯೂಸ್ ಏಜೆನ್ಸಿ' (ಐಆರ್‌ಎನ್‌ಎ) ವರದಿ ಮಾಡಿದೆ.
ಜಾಗತಿಕ ಸಂಸ್ಥೆಗಳ ನಿಷ್ಕ್ರಿಯತೆಯನ್ನು ತರಾಟೆಗೆ ತೆಗೆದುಕೊಂಡಿರುವ ಅವರು, 'ಮಾನವ ಹಕ್ಕುಗಳ ಬಗ್ಗೆ ದೊಡ್ಡದಾಗಿ ಮಾತನಾಡುವ ಸಂಸ್ಥೆಗಳು, ಇಸ್ರೇಲ್‌ನ ಈ ಅಮಾನವೀಯ ಕೃತ್ಯಗಳನ್ನು ತಡೆಯುವಲ್ಲಿ ಸಂಪೂರ್ಣವಾಗಿ ವಿಫಲವಾಗಿವೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಈ ಪ್ರದೇಶದಲ್ಲಿ ಬುದ್ಧಿಜೀವಿಗಳು, ವಿದ್ವಾಂಸರು ಮತ್ತು ಪ್ರಮುಖ ವ್ಯಕ್ತಿಗಳನ್ನು ಗುರಿ ಮಾಡಲಾಗುತ್ತಿದೆ' ಎಂದು ಅವರು ಆರೋಪಿಸಿದ್ದಾರೆ.
ಮುಸ್ಲಿಂ ರಾಷ್ಟ್ರಗಳು ಒಗ್ಗೂಡಲು ಕರೆ:
'ಎಲ್ಲಾ ಮುಸ್ಲಿಂ ರಾಷ್ಟ್ರಗಳು ಒಗ್ಗೂಡಿದರೆ ಮಾತ್ರ ಗಾಜಾ, ಲೆಬನಾನ್ ಮತ್ತು ಪ್ಯಾಲೆಸ್ಟೀನ್‌ನಲ್ಲಿ ನಡೆಯುತ್ತಿರುವ ಮಾನವೀಯ ಬಿಕ್ಕಟ್ಟು ಹಾಗೂ ಸಂಘರ್ಷವನ್ನು ಕೊನೆಗಾಣಿಸಲು ಸಾಧ್ಯ' ಎಂದು ಅವರು ಹೇಳಿದ್ದಾರೆ.
'ಇಸ್ಲಾಮ್ ಪಂಥಗಳು ಮತ್ತು ಜನಾಂಗೀಯ ಭಿನ್ನಾಭಿಪ್ರಾಯಗಳ ಲಾಭವನ್ನು ಬಾಹ್ಯ ಶಕ್ತಿಗಳು ಪಡೆದುಕೊಳ್ಳುತ್ತಿವೆ. ಜಾಗತಿಕ ಶಕ್ತಿಗಳ ಹಿಂಸಾಚಾರ, ದಬ್ಬಾಳಿಕೆ ಮತ್ತು ಭಯೋತ್ಪಾದನೆಯ ವಿರುದ್ಧ ಇಡೀ ಮುಸ್ಲಿಂ ಜಗತ್ತು ಒಗ್ಗಟ್ಟಿನಿಂದ ಹೋರಾಡಬೇಕಿದೆ' ಎಂದು ಅವರು ಕರೆ ನೀಡಿದ್ದಾರೆ.

