ಕೋಲ್ಕತ್ತ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಇಂದು (ಶುಕ್ರವಾರ) ಬೆಳಿಗ್ಗೆ ಪ್ರಯಾಣಿಕರ ರೈಲೊಂದು ಶಾಲಾ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.
ಮುರ್ಷಿದಾಬಾದ್‌ನ ಬೆಹರಾಂಪುರ ಪ್ರದೇಶದ ಕರ್ಣಸುವರ್ಣ ರೈಲ್ವೆ ಕ್ರಾಸಿಂಗ್‌ನಲ್ಲಿ ಬೆಳಿಗ್ಗೆ 7ಕ್ಕೆ ಈ ಘಟನೆ ನಡೆದಿದೆ.
ರೈಲ್ವೆ ಕ್ರಾಸಿಂಗ್ ಗೇಟ್ ತೆರೆದಿದ್ದರಿಂದ ಶಾಲಾ ವಾಹನ ಹಳಿ ದಾಟುತ್ತಿತ್ತು, ಆ ವೇಳೆ ವೇಗವಾಗಿ ಬಂದ ನಿಮತಿತಾ- ಕಟವಾಗೆ ಪ್ಯಾಸೆಂಜರ್ ರೈಲು ವಾಹನಕ್ಕೆ ಡಿಕ್ಕಿ ಹೊಡೆದಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಾಯಗೊಂಡ ವಿದ್ಯಾರ್ಥಿಗಳನ್ನು ಮುರ್ಷಿದಾಬಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಒಂದು ರೈಲು ಹಾದುಹೋಗುವವರೆಗೆ ಕ್ರಾಸಿಂಗ್ ಗೇಟ್ ಮುಚ್ಚಲಾಗಿತ್ತು. ಆ ರೈಲು ಹೋದ ನಂತರ ಗೇಟ್ ತೆರೆಯಲಾಗಿತ್ತು. ಆದರೆ, ಪಕ್ಕದ ಹಳಿಯಲ್ಲಿ ಮತ್ತೊಂದು ರೈಲು ಬರುತ್ತಿದ್ದರೂ ಗೇಟ್‌ಮನ್ ಗೇಟ್‌ನ್ನು ಮತ್ತೆ ಮುಚ್ಚದಿರುವುದೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಆರೋಪಿಸಿದ್ದಾರೆ.
ಕಟವಾದಿಂದ ಸುಮಾರು 48 ಕಿಲೋಮೀಟರ್ ದೂರದಲ್ಲಿರುವ ಕರ್ಣ ಸುವರ್ಣ ನಿಲ್ದಾಣದ ಸಮೀಪವಿರುವ ಲೆವೆಲ್ ಕ್ರಾಸಿಂಗ್ ಗೇಟ್‌ನಲ್ಲಿ ವಿದ್ಯಾರ್ಥಿಗಳನ್ನು ಕರೆದೊಯ್ಯುತ್ತಿದ್ದ ವಾಹನಕ್ಕೆ ರೈಲು ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸ್ ಮತ್ತು ರೈಲ್ವೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ತಲುಪಿದ್ದು, ಗೇಟ್‌ಮನ್‌ನ ನಿರ್ಲಕ್ಷ್ಯದ ಆರೋಪ ಸೇರಿದಂತೆ ಘಟನೆ ಬಗ್ಗೆ ತನಿಖೆ ಆರಂಭಿಸಲಾಗಿದೆ ಎಂದೂ ಅವರು ಹೇಳಿದ್ದಾರೆ.

