ನವದೆಹಲಿ: ಭಾರತ ಮತ್ತು ಕೆನಡಾ ನಡುವಿನ ಪ್ರಸ್ತಾವಿತ ಸಮಗ್ರ ಆರ್ಥಿಕ ಪಾಲುದಾರಿಕೆ ಒಪ್ಪಂದದ ಮೂರನೇ ಸುತ್ತಿನ ಮಾತುಕತೆ ಮುಕ್ತಾಯಗೊಂಡಿದೆ ಎಂದು ಕೇಂದ್ರ ವಾಣಿಜ್ಯ ಇಲಾಖೆ ತಿಳಿಸಿದೆ.
ಉಭಯ ದೇಶಗಳ ನಡುವೆ ಜುಲೈ 6ರಿಂದ 10ರವರೆಗೆ ಕೆನಡಾದ ಒಟ್ಟಾವಾದಲ್ಲಿ ಮಾತುಕತೆ ನಡೆದಿದೆ.
ಈ ವೇಳೆ ಸರಕು, ಸೇವೆಗಳು, ಬೌದ್ಧಿಕ ಆಸ್ತಿ, ವ್ಯವಹಾರಕ್ಕೆ ಇರುವ ತಾಂತ್ರಿಕ ಅಡಚಣೆಗಳು ಸೇರಿದಂತೆ ವಿವಿಧ ವಿಷಯಗಳ ಕುರಿತು ಮಾತುಕತೆ ನಡೆದಿದೆ. ಮಾತುಕತೆಯು ಸಕಾರಾತ್ಮಕವಾಗಿತ್ತು. ಅಲ್ಲದೆ, ಪ್ರಸಕ್ತ ವರ್ಷದಲ್ಲಿಯೇ ಮಾತುಕತೆಯನ್ನು ಪೂರ್ಣಗೊಳಿಸಲು ಎರಡೂ ದೇಶಗಳು ಉದ್ದೇಶಿಸಿವೆ ಎಂದು ಇಲಾಖೆ ತಿಳಿಸಿದೆ.
2030ರ ವೇಳಗೆ ದ್ವಿಪಕ್ಷೀಯ ವ್ಯಾಪಾರದ ಮೌಲ್ಯವನ್ನು ₹4.76 ಲಕ್ಷ ಕೋಟಿಗೆ (50 ಬಿಲಿಯನ್ ಡಾಲರ್) ಹೆಚ್ಚಿಸುವ ಗುರಿಯನ್ನು ಉಭಯ ದೇಶಗಳು ಹೊಂದಿವೆ. ಈ ಹಿನ್ನೆಲೆಯಲ್ಲಿ ಮಾತುಕತೆಯು ಮಹತ್ವ ಪಡೆದಿದೆ. 2024-25ರ ಆರ್ಥಿಕ ವರ್ಷದಲ್ಲಿ ಭಾರತ ಮತ್ತು ಕೆನಡಾ ನಡುವಿನ ದ್ವಿಪಕ್ಷೀಯ ವ್ಯಾಪಾರದ ಮೌಲ್ಯವು ₹82,556 ಕೋಟಿಯಷ್ಟಾಗಿತ್ತು. ಅದು ಕಳೆದ ಆರ್ಥಿಕ ವರ್ಷದಲ್ಲಿ ಶೇ 8.22ರಷ್ಟು ಇಳಿಕೆಯಾಗಿ, ₹75,787 ಕೋಟಿಯಾಗಿದೆ.
ಕೆನಡಾದ ಜನಸಂಖ್ಯೆ 4.16 ಕೋಟಿಯಷ್ಟಾಗಿದ್ದು, ಜಿಡಿಪಿಯು ₹223 ಲಕ್ಷ ಕೋಟಿ (2.34 ಟ್ರಿಲಿಯನ್ ಡಾಲರ್) ಆಗಿದೆ.
ಭಾರತವು ಕೆನಡಾಕ್ಕೆ ಪ್ರಮುಖವಾಗಿ, ಔಷಧಗಳು, ಕಬ್ಬಿಣ ಮತ್ತು ಉಕ್ಕು, ಸಾಗರೋತ್ಪನ್ನಗಳು, ಎಲೆಕ್ಟ್ರಾನಿಕ್ ಸರಕುಗಳು, ರಾಸಾಯನಿಕ ಸೇರಿದಂತೆ ವಿವಿಧ ವಸ್ತುಗಳನ್ನು ರಫ್ತು ಮಾಡುತ್ತದೆ. ಅಲ್ಲದೆ, ದೂರಸಂಪರ್ಕ, ಕಂಪ್ಯೂಟರ್ ಮತ್ತು ಮಾಹಿತಿ ಸೇವೆಗಳು ಹಾಗೂ ಇತರೆ ವ್ಯಾಪಾರ ಸೇವೆಗಳನ್ನು ರಫ್ತು ಮಾಡುತ್ತದೆ.
ಕೆನಡಾದಿಂದ ಭಾರತವು ದ್ವಿದಳ ಧಾನ್ಯಗಳು, ಹರಳು, ಅಮೂಲ್ಯ ಲೋಹಗಳು, ಕಲ್ಲಿದ್ದಲು, ರಸಗೊಬ್ಬರ, ಕಾಗದ, ಕಚ್ಚಾ ಪೆಟ್ರೋಲಿಯಂ ಅನ್ನು ಪ್ರಮುಖವಾಗಿ ಆಮದು ಮಾಡಿಕೊಳ್ಳುತ್ತದೆ.
ಭಾರತ ಮತ್ತು ಕೆನಡಾದ ಮುಕ್ತ ವ್ಯಾಪಾರ ಒಪ್ಪಂದವು ಉತ್ತಮ ಪ್ರಗತಿಯಲ್ಲಿದೆ. ಮುಂದಿನ ಸುತ್ತಿನ ಮಾತುಕತೆ ನಡೆಸಲು ಭಾರತದ ಅಧಿಕಾರಿಗಳ ತಂಡವು ಸೋಮವಾರ ಕೆನಡಾಗೆ ಭೇಟಿ ನೀಡಲಿದೆ. ಮುಂದಿನ ಆರು ತಿಂಗಳೊಳಗೆ ಈ ಒಪ್ಪಂದ ಅಂತಿಮಗೊಳಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಅವರು ಜುಲೈ 4ರಂದು ಹೇಳಿದ್ದರು.

