ಮುಂಬೈ: ಧಾರಾವಿ ಪುನರ್‌ಅಭಿವೃದ್ಧಿ ಯೋಜನೆಯ ಅನುಷ್ಠಾನಗೊಳಿಸುತ್ತಿರುವ ನವಭಾರತ್ ಮೆಗಾ ಡೆವ್‌ಲಪರ್ಸ್ ಪ್ರೈವೆಟ್ ಲಿಮಿಟೆಡ್(ಎನ್‌ಎಂಡಿಪಿಎಲ್) ಅನ್ನು ಅದಾನಿ ನವಭಾರತ್ ಡೆವ್‌ಲಪರ್ಸ್ ಪ್ರೈವೆಟ್ ಲಿಮಿಟೆಡ್(ಎಎನ್‌ಡಿಪಿಎಲ್) ಎಂದು ಮರುನಾಮಕರಣ ಮಾಡಲಾಗಿದೆ.
ಹೆಸರು ಬದಲಾವಣೆಗೆ ಕಂಪನಿಯ ನಿರ್ದೇಶಕರು, ಪಾಲುದಾರರು ಮತ್ತು ಕಾರ್ಪೊರೇಟ್ ಸಚಿವಾಲಯವು ಒಪ್ಪಿಗೆ ನೀಡಿದೆ ಎಂದು ಸೋಮವಾರ ನೀಡಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
'ಈ ಬದಲಾವಣೆಯು ಹೆಸರಿಗೆ ಮಾತ್ರ ಸೀಮಿತ. ಯೋಜನೆಯ ಪಾಲುದಾರಿಕೆ, ಆಡಳಿತ ವ್ಯವಸ್ಥೆ, ಒಪ್ಪಂದದ ಬಾಧ್ಯತೆ ಅಥವಾ ಅನುಷ್ಠಾನದಲ್ಲಿ ಯಾವುದೇ ರೀತಿಯ ಬದಲಾವಣೆಗಳಿಲ್ಲ. ಅದಾನಿ ಸಮೂಹದ ಮಾಲೀಕತ್ವ, ಜವಾಬ್ದಾರಿ ಮತ್ತು ಯೋಜನೆಯ ಒಪ್ಪಂದದಲ್ಲಿರುವ ವಿಚಾರಕ್ಕೆ ಸಂಬಂಧಿಸಿದ ಬದ್ಧತೆಗಳು ಮೊದಲಿನಂತೆ ಇರುತ್ತವೆ' ಎಂದು ತಿಳಿಸಲಾಗಿದೆ.
ಸ್ವಾಧೀನಪಡಿಸಲಾಗಿರುವ ಎಲ್ಲ ಭೂಮಿ ಮತ್ತು ಪುನರ್‌ವಸತಿ ಆಸ್ತಿಗಳು ಮಹಾರಾಷ್ಟ್ರ ಸರ್ಕಾರದ ಅಧಿನದಲ್ಲೇ ಇರುತ್ತವೆ. ಕಾಮಗಾರಿಗೆ ಯಾವುದೇ ಅಡಚಣೆಯಾಗುವುದಿಲ್ಲ. ಧಾರಾವಿ ಪುನರ್‌ಅಭಿವೃದ್ಧಿಗೆ ಸಂಬಂಧಿಸಿದ ಇಲಾಖೆಯ ಶಾಸನಬದ್ಧ ಪಾತ್ರ ಕೂಡ ಬದಲಾಗುವುದಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ.

