ಮುಂಬೈ: ವಾಣಿಜ್ಯ ನಗರಿ ಮುುಂಬೈನಲ್ಲಿ ಭಾನುವಾರ ಭಾರಿ ಮಳೆ ಮತ್ತು ಬಿರುಗಾಳಿಯಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅಲ್ಲದೇ ವಿಮಾನ ಸೇವೆಯಲ್ಲಿಯೂ ವ್ಯತ್ಯಯವಾಗಿದೆ.
ಕುರ್ಲಾ ಪ್ರದೇಶದಲ್ಲಿನ ಅಂಗಡಿಯೊಂದರ ಮೇಲೆ ಮರ ಬಿದ್ದ ಪರಿಣಾಮ ಯೂನುಸ್ ಕುಂಡವಾಲಾ ಎಂಬುವರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಛತ್ರಪತಿ ಶಿವಾಜಿ ಮಹಾರಾಜ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 10.17 ರಿಂದ 11.17ವರೆಗೆ ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಶೇ 90ರಷ್ಟು ವಿಮಾನಗಳು ವಿಳಂಬವಾಗಿ ಸಂಚಾರ ಆರಂಭಿಸಿದ್ದು, ಶೇ 62 ರಷ್ಟು ವಿಮಾನಗಳು ತಡವಾಗಿ ಆಗಮಿಸಿದ್ದಾವೆ ಎಂದು ಫ್ಲೈಟ್‌ರಾಡರ್24.ಕಾಮ್ ತಿಳಿಸಿದೆ.
ಇಂಡಿಗೊದ 4 ವಿಮಾನಗಳನ್ನು ರದ್ದುಗೊಳಿಸಲಾಗಿದ್ದು, ಮುಂಬೈಗೆ ಬರಬೇಕಿದ್ದ 13 ವಿಮಾನಗಳನ್ನು ಹತ್ತಿರದ ಬೇರೆ ವಿಮಾನ ನಿಲ್ದಾಣಗಳಿಗೆ ಮಾರ್ಗ ಬದಲಿಸಲಾಗಿದೆ.
ಬಾಂದ್ರಾ ಪ್ರದೇಶದಲ್ಲಿ ಉದ್ಯಮಿ ಮುಕೇಶ್ ಅಂಬಾನಿ ಅವರು ಪ್ರಯಾಣಿಸುತ್ತಿದ್ದ ವೇಳೆ ಬೆಂಗಾವಲು ಪಡೆಯ ಮುಂಭಾಗ ಮರ ಮುರಿದು ಬಿದ್ದಿದೆ. ಪರಿಣಾಮ ಕೆಲಕಾಲ ವಾಹನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಠಾಣೆ ಜಿಲ್ಲೆಯಲ್ಲಿ ಕಳೆದ 48 ಗಂಟೆಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಹಲವಾರು ಕಟ್ಟಡಗಳಿಗೆ ನೀರು ನುಗ್ಗಿದೆ. ಗ್ಯಾಲರಿಯೊಂದು ಕುಸಿದು ಬಿದ್ದ ಪರಿಣಾಮ ಇಬ್ಬರು ಗಾಯಗೊಂಡಿದ್ದಾರೆ.
ಕಳೆದ 24 ಗಂಟೆಗಳಲ್ಲಿ ನಗರದ ಹಲವು ಭಾಗಗಳಲ್ಲಿ 200-300 ಮಿಲಿ ಮೀಟರ್‌ಗೂ ಹೆಚ್ಚು ಮಳೆ ಸುರಿದಿದೆ ಎಂದು ವರದಿಯಾಗಿದೆ.

