ಚೆನ್ನೈ: ಅಯೋಧ್ಯೆಯ ರಾಮ ಮಂದಿರದಲ್ಲಿ ದೇಣಿಗೆ ಕಳ್ಳತನವಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಅಶೋಕ ಗೆಹಲೋತ್ ಅವರು ಉತ್ತರ ಪ್ರದೇಶ ಸರ್ಕಾರ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೇವಾಲಯದಲ್ಲಿ ಹಗರಣ ನಡೆದಿರುವ ಸಂಬಂಧ ಸಾರ್ವಜನಿಕರಲ್ಲಿ ಮೂಡಿರುವ ಆಕ್ರೋಶವು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ನೇತೃತ್ವದ ಉತ್ತರ ಪ್ರದೇಶ ಬಿಜೆಪಿ ಸರ್ಕಾರದ ಪತನಕ್ಕೆ ಕಾರಣವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಚೆನ್ನೈನಲ್ಲಿ ಮಾಧ್ಯಮದವರೊಂದಿಗೆ ಭಾನುವಾರ ಮಾತನಾಡಿರುವ ಗೆಹಲೋತ್, ಇದು ಗಂಭೀರ ಪ್ರಕರಣವಾಗಿದ್ದು, ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ. ಎಲ್ಲ ವರ್ಗ ಹಾಗೂ ದೇಶದ ಮೂಲೆ ಮೂಲೆಯ ಹಳ್ಳಿಗಳ ಜನರು ದೇವಾಲಯಕ್ಕೆ ದೇಣಿಗೆ ನೀಡಿದ್ದಾರೆ. ಅವರ ಭಾವನೆಗಳಿಗೆ ಘಾಸಿಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.
'ದೇಣಿಗೆ ಕಳವು ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ, ದೇಶದ ಪ್ರತಿಯೊಂದು ಗ್ರಾಮದ ಜನರ ಭಾವನೆಗಳಿಗೆ ನೋವುಂಟಾಗಿದೆ. ಎಲ್ಲೆಡೆ ಅಪಾರ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಅವರನ್ನು (ಉತ್ತರ ಪ್ರದೇಶ ಸರ್ಕಾರವನ್ನು) ಮುಳುಗಿಸಲಿದೆ' ಎಂದು ಹೇಳಿದ್ದಾರೆ.
'ಒಂದು ವೇಳೆ ಎನ್‌ಡಿಎ ಮೈತ್ರಿಕೂಟವು ಕೇಂದ್ರದಲ್ಲಿ ಅಧಿಕಾರ ಕಳೆದುಕೊಂಡರೆ, ಅದಕ್ಕೆ ಮುಖ್ಯ ಕಾರಣ ರಾಮ ಮಂದಿರದ ದೇಣಿಗೆ ಕಳವು ಪ್ರಕರಣವೇ ಆಗಿರಲಿದೆ' ಎಂದಿದ್ದಾರೆ.
'ದೇವಾಲಯದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಅತ್ಯಂತ ಸಂಘಟಿತವಾಗಿ ದುರುಪಯೋಗ ಮಾಡಿಕೊಳ್ಳಲಾಗಿದೆ' ಎಂದು ಆರೋಪಿಸಿರುವ ಅವರು, 'ಅಧಿಕಾರದಲ್ಲಿರುವವರು ಕಳ್ಳತನಕ್ಕೆ ಸಹಕಾರ ನೀಡಿದ್ದಾರೆ' ಎಂದೂ ದೂರಿದ್ದಾರೆ.
'ಕಳ್ಳತನ ನಡೆಯುತ್ತಿರುವುದು ಅಧಿಕಾರದಲ್ಲಿ ಇರುವವರಿಗೆ ಗೊತ್ತಿತ್ತು. ನೀವು ಅದನ್ನು ಏಕೆ ತಡೆಯಲಿಲ್ಲ? ಏಕೆಂದರೆ, ನೀವೂ ಅದರಲ್ಲಿ ಶಾಮೀಲಾಗಿದ್ದಿರಿ. ಇದೀಗ ಬಹುದೊಡ್ಡ ವಿಚಾರವಾಗಿ ಬೆಳೆದಿದೆ. ಅದೇ ನಿಮಗೆ (ಬಿಜೆಪಿಗೆ) ಪೆಟ್ಟು ನೀಡಲಿದೆ' ಎಂದು ಅಭಿಪ್ರಾಯಪಟ್ಟಿದ್ದಾರೆ.
ರಾಜಸ್ಥಾನದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಗೆಹಲೋತ್, ತಮಿಳುನಾಡು ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಚೇರಿಗೆ ಭೇಟಿ ನೀಡಿದ್ದರು.

