ನವದೆಹಲಿ: ದೇಶದಲ್ಲಿ ಮಾರಾಟವಾಗುವ ಎಲ್ಲಾ ಹೊಸ ವಾಹನಗಳಿಗೆ (Vehicles) ಸೈಬರ್ ಭದ್ರತೆಯನ್ನು(Cyber Security) ಕಡ್ಡಾಯಗೊಳಿಸಲು ಕೇಂದ್ರ ಸರ್ಕಾರ (Central Govt) ಮುಂದಾಗಿದೆ. ಇತ್ತೀಚೆಗೆ ಮೊಬೈಲ್ ಅಪ್ಲಿಕೇಷನ್‌ಗಳ ಮೂಲಕ ಇ-ರಿಕ್ಷಾ ಬ್ಯಾಟರಿಗಳನ್ನು ಹ್ಯಾಕ್ ಮಾಡಿದ ಘಟನೆಗಳು ಬೆಳಕಿಗೆ ಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಸರ್ಕಾರ, ವಾಹನಗಳ ಭದ್ರತೆಗಾಗಿ ಕಟ್ಟುನಿಟ್ಟಿನ ನಿಯಮಾವಳಿಗಳನ್ನು ರೂಪಿಸುವ ಕೆಲಸ ಆರಂಭಿಸಿದೆ.
ಮುಂದಿನ ಆರು ತಿಂಗಳಿನಲ್ಲಿ ಈ ಸೈಬರ್ ಭದ್ರತಾ ಚೌಕಟ್ಟು ಸಂಪೂರ್ಣವಾಗಿ ಸಿದ್ಧವಾಗಲಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ದೇಶದಲ್ಲಿ ಮಾರಾಟವಾಗುವ ಪ್ರತಿಯೊಂದು ಹೊಸ ವಾಹನವೂ ಹ್ಯಾಕಿಂಗ್-ನಿರೋಧಕ ವ್ಯವಸ್ಥೆಯನ್ನು ಹೊಂದಿರುವುದನ್ನು ಕಡ್ಡಾಯಗೊಳಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ವಾಹನಗಳಲ್ಲಿ ಚಾಲನಾ ಡೇಟಾವನ್ನು ಸಂಗ್ರಹಿಸಿ, ಸಂಸ್ಕರಿಸಿ, ವಾಹನಕ್ಕೆ ನಿರ್ದೇಶನ ನೀಡಲು ಬಳಸುವ ತಾಂತ್ರಿಕ ವೈಶಿಷ್ಟ್ಯಗಳನ್ನು ಈಗ ಸೂಕ್ಷ್ಮವಾಗಿ ಪರಿಶೀಲಿಸಲಾಗುತ್ತಿದೆ. ಈಗಾಗಲೇ ರಸ್ತೆಯಲ್ಲಿರುವ ಸಂಪರ್ಕಿತ ವಾಹನಗಳ ಸೈಬರ್ ಭದ್ರತೆಯನ್ನು 'ಓವರ್-ದಿ-ಏರ್' (OTA) ಅಪ್‌ಡೇಟ್‌ಗಳ ಮೂಲಕ ಸುಧಾರಿಸಲು ಸರ್ಕಾರ ಯೋಜನೆ ರೂಪಿಸುತ್ತಿದೆ.
ಇ-ರಿಕ್ಷಾ ಬ್ಯಾಟರಿ ಹ್ಯಾಕಿಂಗ್‌ಗೆ ಬಳಸುತ್ತಿದ್ದ ಆಯಪ್‌ಗಳನ್ನು ಸರ್ಕಾರ ಈಗಾಗಲೇ ನಿಷೇಧಿಸಿದೆ. ಆದಾಗ್ಯೂ, ಇಂದಿನ ಆಧುನಿಕ ವಾಹನಗಳಲ್ಲಿರುವ ಆಟೋಮ್ಯಾಟಿಕ್ ಪಾರ್ಕಿಂಗ್, ಬ್ರೇಕಿಂಗ್ ಹಾಗೂ ಲೇನ್ ಅಸಿಸ್ಟ್‌ನಂತಹ ತಂತ್ರಜ್ಞಾನಗಳ ನಿಯಂತ್ರಣ ವ್ಯವಸ್ಥೆಗೆ ಭಂಗ ತರುವ ಸಾಧ್ಯತೆಗಳ ಕುರಿತು ಕಳವಳಗಳು ವ್ಯಕ್ತವಾಗಿವೆ. ನೀತಿ ಆಯೋಗದ ಅಂದಾಜಿನ ಪ್ರಕಾರ, 2030 ರ ವೇಳೆಗೆ ಭಾರತದಲ್ಲಿ ಮಾರಾಟವಾಗುವ ಶೇ. 90 ರಷ್ಟು ಪ್ರಯಾಣಿಕ ವಾಹನಗಳು ಅಡಾಪ್ಟಿವ್ ಕ್ರೂಸ್ ಕಂಟ್ರೋಲ್, ಲೇನ್ ಡಿಪಾರ್ಚರ್ ವಾರ್ನಿಂಗ್ ಮತ್ತು ಆಟೋಮ್ಯಾಟಿಕ್ ಎಮರ್ಜೆನ್ಸಿ ಬ್ರೇಕಿಂಗ್‌ನಂತಹ ಆಧುನಿಕ ಸುರಕ್ಷತಾ ವ್ಯವಸ್ಥೆಗಳನ್ನು ಹೊಂದಿರಲಿವೆ. ಈ ಹಿನ್ನೆಲೆಯಲ್ಲಿ ವಾಹನಗಳ ಸೈಬರ್ ಭದ್ರತೆ ಅತ್ಯಂತ ಪ್ರಾಮುಖ್ಯತೆ ಪಡೆದುಕೊಂಡಿದೆ.

