ನವದೆಹಲಿ: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಪರಿಷತ್ತು (ಎನ್‌ಸಿಇಆರ್‌ಟಿ) ಎಂಟನೇ ತರಗತಿಯ ಸಮಾಜ ವಿಜ್ಞಾನ ವಿಷಯದ ಪರಿಷ್ಕೃತ ಪಠ್ಯಪುಸ್ತಕ ಪ್ರಕಟಿಸಿದ್ದು, ನ್ಯಾಯಾಂಗಕ್ಕೆ ಸಂಬಂಧಿಸಿದಂತೆ ಹೊಸ ವಿಷಯಗಳನ್ನು ಸೇರಿಸಲಾಗಿದೆ.
ಎನ್‌ಸಿಇಆರ್‌ಟಿ ಈ ಹಿಂದೆ ಎಂಟನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗವನ್ನು ದೂಷಿಸುವ ವಿಷಯಗಳನ್ನು ಸೇರಿಸಿತ್ತು.
ಈ ಬಾರಿ ಈ ಭಾಗಗಳನ್ನು ಕೈಬಿಟ್ಟಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್), ನ್ಯಾಯಮಂಡಳಿಗಳು ಮತ್ತು ವಿವಾದ ಪರಿಹಾರಕ್ಕೆ ಪರ್ಯಾಯ ಕಾರ್ಯವಿಧಾನ (ಎಡಿಆರ್) ಕುರಿತ ಹೊಸ ವಿಷಯಗಳನ್ನು ಪರಿಷ್ಕೃತ ಪಠ್ಯಪುಸ್ತಕದಲ್ಲಿ ಸೇರಿಸಲಾಗಿದೆ.
ಅಧ್ಯಾಯದ ಆರಂಭದಲ್ಲಿ ಬರುವ 'ಪ್ರಮುಖ ಪ್ರಶ್ನೆಗಳು' ವಿಭಾಗವು ಬದಲಾವಣೆಯನ್ನು ಕಂಡಿದೆ. 'ಸ್ವತಂತ್ರ ನ್ಯಾಯಾಂಗ ವ್ಯವಸ್ಥೆ ಏಕೆ ಅಗತ್ಯ' ಎಂದು ವಿದ್ಯಾರ್ಥಿಗಳನ್ನು ಕೇಳುವ ಬದಲು, ಪರಿಷ್ಕೃತ ಅಧ್ಯಾಯವು 'ನ್ಯಾಯಯುತ ಮತ್ತು ಸಾಮರಸ್ಯದ ಸಮಾಜಕ್ಕೆ ನ್ಯಾಯಾಂಗ ವ್ಯವಸ್ಥೆ ಏಕೆ ಮುಖ್ಯ' ಎಂದು ಕೇಳುತ್ತದೆ.
ಎನ್‌ಸಿಇಆರ್‌ಟಿ, ಫೆಬ್ರುವರಿಯಲ್ಲಿ ಪ್ರಕಟಿಸಿದ್ದ ಎಂಟನೇ ತರಗತಿಯ ಪಠ್ಯಪುಸ್ತಕದಲ್ಲಿದ್ದ 'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಎಂಬ ಅಧ್ಯಾಯ ವಿವಾದಕ್ಕೆ ಕಾರಣವಾಗಿತ್ತು.
'ಹೆಚ್ಚಿದ ಭ್ರಷ್ಟಾಚಾರ, ದೊಡ್ಡ ಸಂಖ್ಯೆಯಲ್ಲಿ ಪ್ರಕರಣಗಳ ವಿಚಾರಣೆ ಬಾಕಿ ಹಾಗೂ ನ್ಯಾಯಾಧೀಶರ ಕೊರತೆಯು ಭಾರತದ ನ್ಯಾಯಾಂಗ ವ್ಯವಸ್ಥೆ ಎದುರಿಸುತ್ತಿರುವ ಸವಾಲುಗಳು' ಎಂದು ಅಧ್ಯಾಯದಲ್ಲಿ ತಿಳಿಸಲಾಗಿತ್ತು.
ಈ ಅಧ್ಯಾಯದ ಬಗ್ಗೆ ಕಟು ಟೀಕೆ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ಪಠ್ಯಪುಸ್ತಕವನ್ನು ಹಿಂಪಡೆಯುವಂತೆ ತಾಕೀತು ಮಾಡಿತ್ತು.

