ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ದಿನಗಳಿಂದ ಜಂತರ್ ಮಂತರ್ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಯನ್ನು ಅಂತ್ಯಗೊಳಿಸುವುದಾಗಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಶನಿವಾರ ಘೋಷಿಸಿದೆ. ಕೇಂದ್ರ ಸರ್ಕಾರದೊಂದಿಗೆ ನಡೆದ ಮಾತುಕತೆಯಲ್ಲಿ ತಮ್ಮ ಪ್ರಮುಖ ಬೇಡಿಕೆಗಳನ್ನು ಸರ್ಕಾರ ಒಪ್ಪಿಕೊಂಡಿದೆ ಎಂದು ಪಕ್ಷ ತಿಳಿಸಿದೆ.
ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಹಾಗೂ ಜಿತೇಂದ್ರ ಸಿಂಗ್ ಅವರೊಂದಿಗೆ ನಡೆದ ಮಾತುಕತೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಜೆಪಿ ರಾಷ್ಟ್ರೀಯ ವಕ್ತಾರ ಆಶುತೋಷ್ ರಂಕಾ, 'ನಮ್ಮ ಎಲ್ಲ ಬೇಡಿಕೆಗಳನ್ನು ಸರ್ಕಾರ ಒಪ್ಪಿದೆ. ಆದ್ದರಿಂದ ಎಲ್ಲರೂ ಕೂಡಲೇ ಪ್ರತಿಭಟನೆಯನ್ನು ಅಂತ್ಯಗೊಳಿಸಿ ಶಾಂತಿಯುತವಾಗಿ ಮನೆಗೆ ಮರಳಬೇಕು' ಎಂದು ಮನವಿ ಮಾಡಿದ್ದಾರೆ.
'ಸರ್ಕಾರದೊಂದಿಗೆ ಒಪ್ಪಂದವಾಗಿರುವ ಅಂಶಗಳನ್ನು ನಿಗದಿತ ಅವಧಿಯಲ್ಲಿ ಜಾರಿಗೆ ತರಲಾಗುವುದು ಎಂಬ ವಿಶ್ವಾಸದೊಂದಿಗೆ ಸದ್ಭಾವನೆಯ ಸಂಕೇತವಾಗಿ ನಾವು ಪ್ರತಿಭಟನೆಯನ್ನು ಅಂತ್ಯಗೊಳಿಸುತ್ತಿದ್ದೇವೆ' ಎಂದು ಮತ್ತೊಬ್ಬ ಮುಖ್ಯ ವಕ್ತಾರ ಸೌರವ್ ದಾಸ್ ಹೇಳಿದ್ದಾರೆ.
ಮೂರು ಸುತ್ತಿನ ಮಾತುಕತೆ
ಕೇಂದ್ರ ಸರ್ಕಾರದೊಂದಿಗೆ ಮೂರು ಸುತ್ತಿನ ಮಾತುಕತೆ ನಡೆಸಲಾಗಿದೆ ಎಂದು ತಿಳಿಸಿದ ರಂಕಾ, ಜಂತರ್ ಮಂತರ್ನಲ್ಲಿ ನಡೆಯುತ್ತಿದ್ದ ಪ್ರತಿಭಟನೆಗೆ ಮೂರು ಪ್ರಮುಖ ಬೇಡಿಕೆಗಳಿದ್ದವು ಎಂದು ವಿವರಿಸಿದರು.
ಮೊದಲನೆಯದಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ, ಎರಡನೆಯದಾಗಿ ಪ್ರತಿಭಟನಾಕಾರರು ಹಾಗೂ ಸಂಘಟಕರ ವಿರುದ್ಧ ದಾಖಲಿಸಿರುವ ಎಲ್ಲ ಎಫ್ಐಆರ್ಗಳನ್ನು ಹಿಂಪಡೆಯುವುದು ಮತ್ತು ಭವಿಷ್ಯದಲ್ಲಿ ಯಾವುದೇ ಪ್ರಕರಣ ದಾಖಲಿಸದಿರುವುದು, ಮೂರನೆಯದಾಗಿ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಹಿನ್ನೆಲೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ₹1 ಕೋಟಿ ಪರಿಹಾರ ನೀಡುವುದು. ಧರ್ಮೇಂದ್ರ ಪ್ರಧಾನ್ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ನಮ್ಮ ಮೊದಲ ಬೇಡಿಕೆ ಈಡೇರಿದೆ ಎಂದು ಹೇಳಿದ್ದಾರೆ.
ಎಫ್ಐಆರ್ ಹಿಂಪಡೆಯುವ ಭರವಸೆ
ಸೌರವ್ ದಾಸ್ ಮಾತನಾಡಿ, ದೆಹಲಿ ಮಾತ್ರವಲ್ಲದೆ ಬಿಜೆಪಿ ಮತ್ತು ಬಿಜೆಪಿ ಮೈತ್ರಿ ಸರ್ಕಾರಗಳಿರುವ ರಾಜ್ಯಗಳಲ್ಲಿ ಪ್ರತಿಭಟನಾಕಾರರ ವಿರುದ್ಧ ದಾಖಲಾಗಿರುವ ಎಲ್ಲ ಎಫ್ಐಆರ್ಗಳನ್ನು ಹಿಂಪಡೆಯುವಂತೆ ಒತ್ತಾಯಿಸಲಾಗಿತ್ತು ಎಂದು ಹೇಳಿದರು. ಈ ಬೇಡಿಕೆಯನ್ನು ಸರ್ಕಾರ ಒಪ್ಪಿದ್ದು, ಶೀಘ್ರದಲ್ಲೇ ಪ್ರಕರಣಗಳನ್ನು ಹಿಂಪಡೆಯುವುದಾಗಿ ಭರವಸೆ ನೀಡಿದೆ. ದೆಹಲಿಯಲ್ಲಿ ದಾಖಲಾಗಿರುವ 15 ರಿಂದ 20 ಎಫ್ಐಆರ್ಗಳ ಪ್ರತಿಗಳನ್ನು ಮೂರು-ನಾಲ್ಕು ದಿನಗಳಲ್ಲಿ ನೀಡುವುದಾಗಿಯೂ ಸರ್ಕಾರ ತಿಳಿಸಿದೆ ಎಂದು ಹೇಳಿದ್ದಾರೆ.
ಈ ಕುರಿತು ಸರ್ಕಾರದಿಂದ ಲಿಖಿತ ಭರವಸೆ ನೀಡುವಂತೆ ಕೇಳಲಾಗಿದ್ದು, ಮಂಗಳವಾರದೊಳಗೆ ಅದನ್ನು ನೀಡುವುದಾಗಿ ಸರ್ಕಾರ ತಿಳಿಸಿದೆ ಎಂದು ಅವರು ಹೇಳಿದ್ದಾರೆ.
ಪರಿಹಾರ
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ಸಂತ್ರಸ್ತರ ಕುಟುಂಬಗಳಿಗೆ ₹1 ಕೋಟಿ ಪರಿಹಾರ ನೀಡುವಂತೆ ಒತ್ತಾಯಿಸಲಾಗಿತ್ತು. ನಿಯಮದ ವ್ಯಾಪ್ತಿಯಲ್ಲಿ ಸಾಧ್ಯವಾಗುವ ಗರಿಷ್ಠ ಗೌರವಧನ ಅಥವಾ ಪರಿಹಾರವನ್ನು ನೀಡುವುದಾಗಿ ಸರ್ಕಾರ ಆಶ್ವಾಸನೆ ನೀಡಿದೆ ಎಂದು ಆಶುತೋಷ್ ರಂಕಾ ತಿಳಿಸಿದ್ದಾರೆ.
ಸಿಜೆಪಿ ಮಾತ್ರವಲ್ಲ ಬೀದಿಗಿಳಿದಿದ್ದಾರೆ ರೈತರು, ಆದಿವಾಸಿಗಳು, ಪರಿಸರವಾದಿಗಳು...
ಬಹುತೇಕ ಎಲ್ಲ ಬೇಡಿಕೆಗಳಿಗೆ ಒಪ್ಪಿಗೆ: ನಡ್ಡಾ
ಪ್ರತಿಭಟನಾಕಾರರು ಮುಂದಿಟ್ಟ ಬಹುತೇಕ ಎಲ್ಲ ಬೇಡಿಕೆಗಳನ್ನು ಸರ್ಕಾರ ಸಹಾನುಭೂತಿ ಮತ್ತು ಸಕಾರಾತ್ಮಕ ಮನೋಭಾವದಿಂದ ಒಪ್ಪಿಕೊಂಡಿದೆ ಎಂದು ಜೆ.ಪಿ ನಡ್ಡಾ ಹೇಳಿದ್ದಾರೆ. ಸಿಜೆಪಿ ನಿಯೋಗದೊಂದಿಗೆ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಹಾರದ ವಿಷಯದಲ್ಲಿ ಸರ್ಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದು, ನಿಯಮಾವಳಿಗಳ ವ್ಯಾಪ್ತಿಯಲ್ಲಿ ಸಾಧ್ಯವಿರುವ ಗರಿಷ್ಠ ಗೌರವಧನ ಅಥವಾ ಪರಿಹಾರವನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಸಿಜೆಪಿ ಸಲ್ಲಿಸಿರುವ ಐದು ಅಂಶಗಳ ಶಿಕ್ಷಣ ಮತ್ತು ಪರೀಕ್ಷಾ ಸುಧಾರಣೆಯ ಪ್ರಸ್ತಾವನೆ ಕುರಿತು ಸರ್ಕಾರ ಗಂಭೀರವಾಗಿ ಪರಿಶೀಲನೆ ನಡೆಸಲಿದೆ ಎಂದು ಹೇಳಿದ್ದಾರೆ. ಪ್ರತಿಭಟನೆಯ ವೇಳೆ ದಾಖಲಾಗಿರುವ ಪ್ರಕರಣಗಳ ಕುರಿತು ಪ್ರತಿಗಳನ್ನು ಒದಗಿಸಲಾಗುವುದು. ಪ್ರತಿಭಟನಾಕಾರರ ವಿರುದ್ಧ ಪ್ರತೀಕಾರದ ಕ್ರಮ ಕೈಗೊಳ್ಳುವುದಿಲ್ಲ. ಪರಿಹಾರ ನೀಡುವ ವಿಷಯದಲ್ಲೂ ಸರ್ಕಾರ ಸಹಾನುಭೂತಿಯ ದೃಷ್ಟಿಕೋನ ಹೊಂದಿದೆ ಎಂದು ಅವರು ಹೇಳಿದ್ದಾರೆ.

