ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸೇಶೆಲ್ಸ್ ದೇಶದ ನೂತನ ಅಧ್ಯಕ್ಷೀಯ ಅತ್ಯುನ್ನತ ಗೌರವ ಲಭಿಸಿರುವುದನ್ನು ಟೀಕಿಸಿದ್ದ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್ ಅವರಿಗೆ ಭಾರತ ಸರಕಾರವು ತೀಕ್ಷ್ಣವಾಗಿ ತಿರುಗೇಟು ನೀಡಿದೆ. ಅವರಿಗೆ ಮಾಡುವುದಕ್ಕೆ ಕೆಲಸವೇನೂ ಇಲ್ಲ, ತನ್ನ ತಿಳುವಳಿಕೆಗೆ ಮೀರಿದ ವಿಷಯಗಳ ಬಗ್ಗೆ ಮೂರ್ಖತನದ ಕಾಮೆಂಟ್‌ಗಳನ್ನು ಮಾಡುತ್ತ ಕಾಲ ಕಳೆಯುತ್ತಿದ್ದಾರೆ ಎಂದು ಭಾರತವು ಕುಟುಕಿದೆ.
ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಭಾರತ ಸರಕಾರದ ಮೂಲಗಳು ಖ್ವಾಜಾ ಆಸಿಫ್ 'ಮಾನಸಿಕ ಅಸ್ವಸ್ಥ'ರಾಗಿದ್ದು,ಇದು ಎಲ್ಲರಿಗೂ ತಿಳಿದಿರುವ ವಿಷಯ ಎಂದು ಬಣ್ಣಿಸಿವೆ. ಅಲ್ಲದೆ, ಅವರು ರಕ್ಷಣಾ ಸಚಿವರಾಗಿ ಸೇವೆ ಸಲ್ಲಿಸುತ್ತಿರುವುದೇ ಪಾಕಿಸ್ತಾನದ ಇಂದಿನ ದುಃಸ್ಥಿತಿಯನ್ನು ತೋರಿಸುತ್ತದೆ ಎಂದು ಹೇಳಿವೆ.
ಅಸೂಯೆ ಎನ್ನುವುದು ಯಾವಾಗಲೂ ಕೆಟ್ಟ ಪ್ರೇರಣೆಯಾಗಿದೆ, ವಿಶೇಷವಾಗಿ ದ್ವೇಷ ಭಾಷಣದಲ್ಲಿ ಮುಳುಗಿರುವ ವ್ಯಕ್ತಿಯಿಂದ ಇಂತಹ ಹೇಳಿಕೆ ಬಂದರೆ ಆಶ್ಚರ್ಯವೇನಿಲ್ಲ ಎಂದು ಮೂಲಗಳು ತಿಳಿಸಿವೆ.
ಆಸಿಫ್ ಅವರು ಮೋದಿಯವರಿಗೆ ಸೇಶೆಲ್ಸ್ ನೀಡಿದ ಗೌರವವನ್ನು 'ಯೋಜಿತ' ಮನ್ನಣೆ ಎಂದು ಅಣಕಿಸಿದ ಹಿನ್ನೆಲೆಯಲ್ಲಿ ಭಾರತದಿಂದ ಈ ಕಠಿಣ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮೋದಿ ಕಳೆದ ವಾರ ಸೇಶೆಲ್ಸ್‌ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಪರಿಸರ ಸಂರಕ್ಷಣೆ ಮತ್ತು ಸಣ್ಣ ದ್ವೀಪ ಅಭಿವೃದ್ಧಿಶೀಲ ರಾಷ್ಟ್ರಗಳ ಆಕಾಂಕ್ಷೆಗಳನ್ನು ಬೆಂಬಲಿಸುವಲ್ಲಿ ಅವರ ದೃಢವಾದ ಬದ್ಧತೆಗಾಗಿ ಅವರಿಗೆ ದ್ವೀಪರಾಷ್ಟ್ರದ 'ಗಾರ್ಡಿಯನ್ ಆಫ್ ದಿ ಬ್ಲೂ ಹೊರೈಜನ್' ಅಧ್ಯಕ್ಷೀಯ ವಿಶಿಷ್ಟ ಗೌರವವನ್ನು ಪ್ರದಾನಿಸಲಾಗಿತ್ತು. ಮೋದಿ ಈ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿಯಾಗಿದ್ದಾರೆ. ಸೆಶೆಲ್ಸ್ ಸರಕಾರವು ತನ್ನ ರಾಷ್ಟ್ರೀಯ ಪ್ರಶಸ್ತಿಗಳ ವ್ಯವಸ್ಥೆಯನ್ನು ಪುನರ್‌ಪರಿಶೀಲಿಸಿದ ಬಳಿಕ ಮೋದಿ ಭೇಟಿಗೆ ಕೆಲವೇ ವಾರಗಳ ಮೊದಲು ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿತ್ತು.
ಪ್ರಶಸ್ತಿ ಕುರಿತ ವಿವಾದ
ಈ ಹೊಸ ಪ್ರಶಸ್ತಿಯು ಭಾರತದಲ್ಲಿ ರಾಜಕೀಯ ಜಟಾಪಟಿಗೆ ಕಾರಣವಾಗಿತ್ತು. ವಿರೋಧ ಪಕ್ಷಗಳು ಅಧಿಕೃತ ಪ್ರಶಸ್ತಿ ಪತ್ರದಲ್ಲಿಯ ಇದ್ದ ಕಾಗುಣಿತ ಮತ್ತು ಮುದ್ರಣ ದೋಷಗಳನ್ನು ಎತ್ತಿ ತೋರಿಸಿದ್ದವು. ಅಲ್ಲದೆ ಪ್ರಶಸ್ತಿ ಪತ್ರದ ಚಿತ್ರವನ್ನು ಎಐ ಪರಿಕರಗಳನ್ನು ಬಳಸಿ ತರಾತುರಿಯಲ್ಲಿ ಸಿದ್ಧಪಡಿಸಲಾಗಿದೆ ಎಂಬ ಟೀಕೆಗಳೂ ಕೇಳಿಬಂದಿದ್ದವು.
ಆದರೆ ಈ ಗೌರವವು ಅಧಿಕೃತವಾದುದು ಎಂದು ಸೇಶೆಲ್ಸ್ ಸರಕಾರ ಸ್ಪಷ್ಟಪಡಿಸಿದೆ.

