ಪಾಟ್ನಾ: ಜನ್ ಸೂರಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್ ಇದೇ ಮೊದಲ ಬಾರಿಗೆ ಚುನಾವಣಾ ರಾಜಕಾರಣಕ್ಕೆ ಪಾದಾರ್ಪಣೆ ಮಾಡಲಿದ್ದು, ಮುಂಬರುವ ಬಿಹಾರದ ಬಂಕಿಪುರ್ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ.
ತಮ್ಮ ಸ್ಪರ್ಧೆಯು ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧದ ಜನಮತ ಪರೀಕ್ಷೆಯಾಗಲಿದೆ ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಂಕಿಪುರ್ ಕ್ಷೇತ್ರದ ಮತದಾರರು ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿದ್ದು, ಕ್ಷೇತ್ರದ ಪ್ರತಿನಿಧಿಯಾಗಿ ಆಯ್ಕೆಯಾಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
"ಬಂಕಿಪುರ್‌ನ ಜನರು ಬಿಹಾರದ ಅತ್ಯಂತ ಶ್ರೀಮಂತ ಮತ್ತು ವಿದ್ಯಾವಂತ ಜನರು. ಅವರು ಅತ್ಯುತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ನನ್ನ ಮೇಲೆ ವಿಶ್ವಾಸವಿಡಬಹುದು ಎಂದು ಅವರಿಗೆ ಅನಿಸಿದರೆ, ನನಗೆ ಮತ ಚಲಾಯಿಸುವಂತೆ ಮನವಿ ಮಾಡುತ್ತೇನೆ. ನನ್ನ ಪಕ್ಷದ ಏಕೈಕ ಶಾಸಕನಾಗಿದ್ದರೂ, ವಿಧಾನಸಭೆಯಲ್ಲಿರುವ ಉಳಿದ 242 ಶಾಸಕರನ್ನು ನಾನು ಸಮರ್ಥವಾಗಿ ಎದುರಿಸಬಲ್ಲೆ" ಎಂದು ಅವರು ಹೇಳಿದರು.
ಬಂಕಿಪುರ್ ಕ್ಷೇತ್ರದಿಂದ ಪ್ರಶಾಂತ್ ಕಿಶೋರ್ ಸ್ಪರ್ಧಿಸಲಿದ್ದಾರೆ ಎಂದು ಜನ್ ಸೂರಜ್ ಪಕ್ಷದ ಬಿಹಾರ ಘಟಕದ ಅಧ್ಯಕ್ಷ ಮನೋಜ್ ಭಾರ್ತಿ ಪ್ರಕಟಿಸಿದ್ದಾರೆ. ಕಳೆದ ವಾರ ಚುನಾವಣಾ ಆಯೋಗವು ಉಪ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದ ಬೆನ್ನಲ್ಲೇ ನಡೆದ ಪಕ್ಷದ ಕೇಂದ್ರ ಸಮಿತಿ ಸಭೆಯಲ್ಲಿ ಈ ಕುರಿತು ಅಧಿಕೃತ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ಅವರು ರಾಜ್ಯಸಭೆಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಬಂಕಿಪುರ್ ವಿಧಾನಸಭಾ ಕ್ಷೇತ್ರ ತೆರವಾಗಿದೆ.
48 ವರ್ಷದ ಜನ್ ಸೂರಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್, ಬಿಜೆಪಿ ನೇತೃತ್ವದ ಸರ್ಕಾರದ ಕಟು ಟೀಕಾಕಾರರಾಗಿ ಗುರುತಿಸಿಕೊಂಡಿದ್ದಾರೆ. ಬಿಜೆಪಿ ನಾಯಕ ಸಾಮ್ರಾಟ್ ಚೌಧರಿ ಅವರು ಜನಮತವಿಲ್ಲದೆ ಮುಖ್ಯಮಂತ್ರಿಯಾಗಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

