ದೇವಸ್ಥಾನದ ದೇಣಿಗೆ ಮತ್ತು ಕಾಣಿಕೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂಬ ಆರೋಪಗಳು ಕೇಳಿ ಬರುವ ಕೆಲವೇ ದಿನಗಳಿಗೆ ಮುನ್ನ, ಅಂದರೆ ಜುಲೈ 1ರಂದು ದೇವಸ್ಥಾನದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳನ್ನು ಬದಲಾಯಿಸಲಾಗಿತ್ತು ಎಂಬ ವಿಷಯ ಈಗ ಬೆಳಕಿಗೆ ಬಂದಿದೆ.
ದೇವಸ್ಥಾನದ ದೇಣಿಗೆ ಮತ್ತು ಕಾಣಿಕೆಗಳನ್ನು ಸರಿಯಾಗಿ ನಿರ್ವಹಿಸದೆ ದುರುಪಯೋಗಪಡಿಸಿಕೊಳ್ಳಲಾಗಿದೆ ಎಂಬ ಆರೋಪಗಳ ಸುತ್ತ ಈ ವಿವಾದ ಕೇಂದ್ರೀಕೃತವಾಗಿದೆ. ಶ್ರೀ ಬದರಿನಾಥ-ಕೇದಾರನಾಥ ದೇವಸ್ಥಾನ ಸಮಿತಿಯ (ಬಿಕೆಟಿಸಿ) ಉದ್ಯೋಗಿಯೊಬ್ಬರು ಈ ಗಂಭೀರ ಆರೋಪ ಎದುರಿಸುತ್ತಿದ್ದಾರೆ. ಈ ವಿಷಯ ಸಾಮಾಜಿಕ ಜಾಲ ತಾಣದಲ್ಲಿ ವ್ಯಾಪಕ ಚರ್ಚೆಯಾದ ಬೆನ್ನಲ್ಲೇ ಸಮಿತಿ ಈ ಬಗ್ಗೆ ತನಿಖೆಗೆ ಆದೇಶಿಸಿದೆ.
ಸಿಸಿಟಿವಿ ಕ್ಯಾಮೆರಾಗಳನ್ನು ಬದಲಾಯಿಸಿರುವ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಬಿಕೆಟಿಸಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸೋಹನ್ ಸಿಂಗ್ ರಂಗಡ್ ಅವರು, ಹೊಸ ಕ್ಯಾಮೆರಾಗಳನ್ನು ಅಳವಡಿಸಿವುದು ಒಂದು ಸಾಮಾನ್ಯ ಪ್ರಕ್ರಿಯೆಯಾಗಿದೆ ಎಂದರು.
ದಾನಿಯೊಬ್ಬರು ದೇವಸ್ಥಾನಕ್ಕೆ ಹೈ ರೆಸಲ್ಯೂಷನ್ ಕಣ್ಗಾವಲು ಉಪಕರಣಗಳನ್ನು ಉಡುಗೊರೆಯಾಗಿ ನೀಡಿದ ನಂತರ ದೇವಸ್ಥಾನದಲ್ಲಿದ್ದ ಎಲ್ಲಾ 32 ಸಿಸಿಟಿವಿ ಕ್ಯಾಮೆರಾಗಳನ್ನು ಬದಲಾಯಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಹಳೆಯ ಸಿಸಿಟಿವಿ ರೆಕಾರ್ಡಿಂಗ್ ಡಿವಿಆರ್ ಸಿಸ್ಟಮ್ನಲ್ಲಿ ಸಂಪೂರ್ಣವಾಗಿ ಸುರಕ್ಷಿತವಾಗಿವೆ ಮತ್ತು ಅವು ತನಿಖೆಗೆ ಲಭ್ಯವಿರುತ್ತವೆ ಎಂದು ರಂಗಡ್ ತಿಳಿಸಿದರು.
ಬಿಕೆಟಿಸಿ ಅಧ್ಯಕ್ಷ ಹೇಮಂತ್ ದ್ವಿವೇದಿ ಅವರು ಈ ಆರೋಪಗಳ ಕುರಿತು ನಿಷ್ಪಕ್ಷಪಾತ ಮತ್ತು ಸತ್ಯಾಧರಿತ ತನಿಖೆಗೆ ಆದೇಶಿಸಿದ್ದಾರೆ. ಅಲ್ಲದೆ, ಸಂಬಂಧಿಸಿದ ಉದ್ಯೋಗಿಗಳಿಂದ ವಿವರಣೆ ಕೇಳಿದ್ದಾರೆ ಎಂದು ಅವರು ಹೇಳಿದರು. ತನಿಖೆಯ ಸಂದರ್ಭ ಯಾವುದೇ ಉದ್ಯೋಗಿ ತಪ್ಪಿತಸ್ಥ ಎಂದು ಕಂಡು ಬಂದರೆ, ಅವರ ವಿರುದ್ಧ ಕಟ್ಟು ನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅವರು ಹೇಳಿದರು.

