ನವದೆಹಲಿ: ರಾಮಮಂದಿರದ ದೇಣಿಗೆ ದುರುಪಯೋಗ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ, ಬಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್(ವಿಎಚ್ಪಿ) ವಿರುದ್ಧ ವಾಗ್ದಾಳಿ ನಡೆಸಿರುವ ರಾಜ್ಯಸಭಾ ಸಂಸದ ಕಪಿಲ್ ಸಿಬಲ್, ಅವರನ್ನು ನಕಲಿ ಹಿಂದೂಗಳು ಎಂದು ಕರೆದಿದ್ದಾರೆ.
ಈ ಬಗ್ಗೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, 'ಬಿಜೆಪಿ, ವಿಎಚ್ಪಿ, ಬಜರಂಗದಳ - ರಾಮನ ಹೆಸರಿನಲ್ಲಿ ಮತ ಕೇಳುವ ಇವರು, ನಂತರ ರಾಮನನ್ನೇ ಲೂಟಿ ಮಾಡುತ್ತಾರೆ' ಎಂದು ಆರೋಪಿಸಿದ್ದಾರೆ.
'ಅಸಲಿ ಹಿಂದೂಗಳ ಬಗ್ಗೆ ಇವರಿಗೇನು ಗೊತ್ತು? ಇವರೆಲ್ಲಾ ನಕಲಿ ಹಿಂದೂಗಳು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಣಿಗೆ ದುರುಪಯೋಗದ ಬಗ್ಗೆ ತನಿಖೆ ನಡೆಸಲು ಉತ್ತರ ಪ್ರದೇಶದ ಸರ್ಕಾರವು ವಿಶೇಷ ತನಿಖಾ ತಂಡವನ್ನು(ಎಸ್ಐಟಿ) ರಚಿಸಿದ್ದು, ಜೂನ್ 25ರಂದು ಪ್ರಾಥಮಿಕ ವರದಿ ಸಲ್ಲಿಸಿದೆ. ಆರೋಪಕ್ಕೆ ಸಂಬಂಧಿಸಿದಂತೆ ಈವರೆಗೆ ಎಂಟು ಜನರನ್ನು ಬಂಧಿಸಲಾಗಿದೆ.
ಎಂಟು ಮಂದಿ ಆರೋಪಿಗಳ ಪೈಕಿ ಆರು ಜನರಿಂದ ಸುಮಾರು ₹80 ಲಕ್ಷ ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.
ಏತನ್ಮಧ್ಯೆ, ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ನಿವಾಸಕ್ಕೆ ತೆರಳಿದ ಪೊಲೀಸರು ಅವರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ. ಟ್ರಸ್ಟ್ನ ಅಧ್ಯಕ್ಷ ಮಹಂತ್ ನೃತ್ಯ ಗೋಪಾಲ್ ದಾಸ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದರ ಬೆನ್ನಲ್ಲೇ ಬುಧವಾರ ಮತ್ತೊಂದು ಸ್ಪೋಟಕ ವರದಿ ಬಹಿರಂಗಗೊಂಡಿದ್ದು, ಕಳೆದ ವರ್ಷ ನಡೆದ ಮಹಾ ಕುಂಭಮೇಳದ ಸಮಯದಲ್ಲಿ ಅತಿ ಹೆಚ್ಚು ಲೂಟಿ ನಡೆದಿವುದಾಗಿ ತಿಳಿದುಬಂದಿದೆ.

