ಮುಂಬೈ: ಮುಂಬೈಯಲ್ಲಿ ಭಾರಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಎಂದು ವರದಿಯಾಗಿದೆ.
ಮಳೆಯಿಂದಾಗಿ ತಗ್ಗು ಪ್ರದೇಶಗಳು, ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ.ರೈಲು ಸೇವೆಯಲ್ಲೂ ವ್ಯತ್ಯಯ ಉಂಟಾಗಿದೆ.
ಸದ್ಯಕ್ಕೆ ಮಳೆ ಕಡಿಮೆಯಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ.
ಹಾಗೆಯೇ ದಿನವಿಡೀ ವ್ಯಾಪಕ ಮಳೆ ಸುರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಕಳೆದ 24 ಗಂಟೆಗಳಲ್ಲಿ ಮುಂಬೈನ ಹಲವು ಪ್ರದೇಶಗಳಲ್ಲಿ 200 ಮಿಮೀಗಿಂತ ಹೆಚ್ಚು ಮಳೆ ದಾಖಲಾಗಿದೆ ಎಂದು ಬೃಹನ್ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ತಿಳಿಸಿದೆ.
24 ಗಂಟೆಗಳ ಅವಧಿಯಲ್ಲಿ ಪೂರ್ವ ಉಪನಗರಗಳಲ್ಲಿ ಸರಾಸರಿ 189 ಮಿ.ಮೀ ಮಳೆಯಾಗಿದೆ. ದ್ವೀಪ ನಗರದಲ್ಲಿ 172 ಮಿ.ಮೀ ಮತ್ತು ಪಶ್ಚಿಮ ಉಪನಗರಗಳಲ್ಲಿ 165 ಮಿ.ಮೀ ಸರಾಸರಿ ಮಳೆ ದಾಖಲಾಗಿದೆ ಎಂದು ಬಿಎಂಸಿ ಮಾಹಿತಿ ನೀಡಿದೆ.
ಗುರುವಾರ ಮುಂಜಾನೆಯಿಂದಲೇ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ದಾದರ್, ಪರೇಲ್, ಹಿಂದ್ಮಾತಾ, ಚಾರ್ಕೋಪ್, ವರ್ಲಿ, ಗೋರೆಗಾಂವ್ ಮತ್ತು ಅಂಧೇರಿಯಂತಹ ಪ್ರಮುಖ ಪ್ರದೇಶಗಳಲ್ಲಿ ರಸ್ತೆಗಳು ಜಲಾವೃತಗೊಂಡಿದ್ದು, ಪ್ರಯಾಣಿಕರಿಗೆ ತೀವ್ರ ಅನಾನುಕೂಲ ಉಂಟಾಗಿದೆ.
ರೈಲು ಹಳಿಗಳು ಸಂಪೂರ್ಣವಾಗಿ ಮುಳುಗದಿದ್ದರೂ, ನೀರು ನಿಂತಿರುವುದರಿಂದ ರೈಲು ಸಂಚಾರದ ಮೇಲೆಯೂ ಪರಿಣಾಮ ಬೀರಿದೆ. ಹಲವು ಲೋಕಲ್ ರೈಲು ಸೇವೆಗಳು ನಿಗದಿತ ಸಮಯಕ್ಕಿಂತ 10 ರಿಂದ 15 ನಿಮಿಷ ತಡವಾಗಿ ಚಲಿಸುತ್ತಿವೆ. ಇದರಿಂದಾಗಿ ರೈಲುಗಳಲ್ಲಿ ಜನಸಂದಣಿ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಂಬೈ ನಗರ ಮತ್ತು ಇತರ ಪ್ರದೇಶಗಳಲ್ಲಿ ಗುರುವಾರ ರಾತ್ರಿ ಮತ್ತು ಶುಕ್ರವಾರ ಮುಂಜಾನೆ ವೇಳೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

