ನವದೆಹಲಿ: ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ವಕ್ತಾರರೊಂದಿಗೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಮಾತುಕತೆ ನಡೆಸಿದ್ದಾರೆ.
ಸಿಜೆಪಿ ವಕ್ತಾರರಾದ ಅಶುತೋಷ್ ರಾಂಕಾ ಮತ್ತು ಸೌರವ್ ದಾಸ್ ಅವರು, ಪಕ್ಷದ ಬೇಡಿಕೆಗಳನ್ನು ಒಳಗೊಂಡ ಪತ್ರವನ್ನು ನಡ್ಡಾ ಅವರಿಗೆ ಸಲ್ಲಿಸಿದ್ದಾರೆ. ಸಿಜೆಪಿಯು ಜಂತರ್ ಮಂತರ್‌ನಲ್ಲಿ ನಡೆಸುತ್ತಿರುವ ಪ್ರತಿಭಟನೆ ಹಾಗೂ ಬೇಡಿಕೆಗಳ ಕುರಿತು ನಿಮ್ಮೊಂದಿಗೆ ನಡೆಸಿದ ಮಾತುಕತೆಯ ಲಿಖಿತ ಜ್ಞಾಪನ ಪತ್ರ ಇದಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
'ಇದು ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷ ನಡೆಸುತ್ತಿರುವ ಪ್ರತಿಭಟನೆಗೆ ಸಂಬಂಧಿಸಿದ ವಿಚಾರ. ಮೊದಲಿಗೆ, ದೇಶದಾದ್ಯಂತ ಜೂನ್ 6ರಂದು ಶಾಂತಿಯುತವಾಗಿ ಸರಣಿ ಪ್ರತಿಭಟನೆಗಳು ನಡೆದವು. ನಂತರ, ವಿವಿಧ ನಗರಗಳಲ್ಲಿ ಸಭೆ ನಡೆಸಲಾಯಿತು. ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಂಪುಟದಿಂದ ವಜಾ ಮಾಡಬೇಕು ಎಂಬುದು ಮೊದಲನೇ ದಿನದಿಂದ ನಮ್ಮ ಬೇಡಿಕೆಯಾಗಿದೆ' ಎಂದು ಪತ್ರದಲ್ಲಿ ಸ್ಪಷ್ಟಪಡಿಸಲಾಗಿದೆ.
'ತಮ್ಮ ಖಾತೆಯನ್ನು ನಿಭಾಯಿಸುವಲ್ಲಿ ಪ್ರಧಾನ್ ವಿಫಲವಾಗಿದ್ದಾರೆ ಎಂಬುದು ದೇಶದ ಯುವಕರ ನಂಬಿಕೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ, ಇತರ ಪರೀಕ್ಷಾ ಅಕ್ರಮಗಳಿಗೆ ಅವರೇ (ಧರ್ಮೇಂದ್ರ ಪ್ರಧಾನ್) ಹೊಣೆ. ನೀಟ್ ಪ್ರಶ್ನೆಪತ್ರಿಕೆ ಸೋರಿಕೆಯಿಂದ, ನಮ್ಮ ದಾಖಲೆ ಪ್ರಕಾರ 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇಂತಹ ಅನೇಕ ಪ್ರಶ್ನೆಪತ್ರಿಕೆಗಳು ಸೋರಿಕೆಯಾಗಿವೆ. ಹಲವು ಪರೀಕ್ಷೆಗಳಲ್ಲಿ ಲೋಪಗಳಾಗಿವೆ. ಆದಾಗ್ಯೂ, ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಪ್ರಧಾನ್ ಅವರು ಯಾವುದೇ ಕ್ರಮ ಕೈಗೊಂಡಿಲ್ಲ. ಇದು, ಶಿಕ್ಷಣ ಸಚಿವರಾಗಿ ಅವರ ಅಸಮರ್ಥತೆಯನ್ನು ಎತ್ತಿ ತೋರಿಸುತ್ತದೆ' ಎಂದು ಪ್ರತಿಪಾದಿಸಲಾಗಿದೆ.
'ನಾವು ಜೂನ್ 20 ರಂದು ಅನಿರ್ದಿಷ್ಟಾವಧಿ ಪತ್ರಿಭಟನೆ ಪ್ರಾರಂಭಿಸಿದೆವು. ಹೆಸರಾಂತ ಪರಿಸರವಾದಿ, ಶಿಕ್ಷಣ ತಜ್ಞರಾದ ಸೊನಮ್ ವಾಂಗ್ಚೂಕ್ ಅವರು ನಮ್ಮೊಂದಿಗೆ ಸೇರಿಕೊಂಡರು. ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲವಾದ್ದರಿಂದ, ವಾಂಗ್ಚೂಕ್ ಅವರು ಜೂನ್ 28ರಂದು ಉಪವಾಸ ಸತ್ಯಾಗ್ರಹ ಆರಂಭಿಸಿದರು. ಸತ್ಯಾಗ್ರಹ ಈವರೆಗೆ (ಜುಲೈ 20ರವರೆಗೆ) ಮುಂದುವರಿದಿದೆ' ಎಂದು ತಿಳಿಸಲಾಗಿದೆ.
'ಇದೇ ವಿಚಾರಗಳ ಹಿನ್ನೆಲೆಯಲ್ಲಿ ಹಾಗೂ ಇಂದು (ಜುಲೈ 20) ಸಂಸತ್ತಿಗೆ ಶಾಂತಿಯುತ ಮೆರವಣಿಗೆ ನಡೆಸಲು ಕರೆ ನೀಡಿದ್ದರ ಬಗ್ಗೆ ನಮ್ಮ ಬೇಡಿಕೆಗಳತ್ತ ತಕ್ಷಣವೇ ಗಮನಹರಿಸಬೇಕು' ಎಂದು ಮನವಿ ಮಾಡಲಾಗಿದೆ.
ಹಾಗೆಯೇ, ಪಕ್ಷದ ಮೂರು ಬೇಡಿಕೆಗಳನ್ನೂ ಪತ್ರದಲ್ಲಿ ಉಲ್ಲೇಖಿಸಲಾಗಿದೆ. '1. ಸೋನಮ್ ಅವರ ಚಟುವಟಿಕೆಗಳಿಗೆ ಯಾವುದೇ ನಿರ್ಬಂಧಗಳಿಲ್ಲದೆ, ಬಿಡುಗಡೆ ಮಾಡಬೇಕು. 2. ಧರ್ಮೇಂದ್ರ ಪ್ರಧಾನ್ ಅವರಿಂದ ರಾಜೀನಾಮೆ ಪಡೆಯಬೇಕು ಇಲ್ಲವೇ, ವಜಾ ಮಾಡಬೇಕು. 3. ಪ್ರಶ್ನೆ ಪತ್ರಿಕೆ ಸೋರಿಕೆ ಬಳಿಕೆ ಆತ್ಮಹತ್ಯೆ ಮಾಡಿಕೊಂಡಿರುವ ಎಲ್ಲ ವಿದ್ಯಾರ್ಥಿಗಳ ಕುಟುಂಬದವರಿಗೆ ತಲಾ ₹ 1 ಕೋಟಿ ಪರಿಹಾರ ನೀಡಬೇಕು' ಎಂದು ಒತ್ತಾಯಿಸಲಾಗಿದೆ.
ಹಾಗೆಯೇ, 'ನಮ್ಮ ಬೇಡಿಕೆಗಳು ಕಾನೂನುಬದ್ಧ ಹಾಗೂ ದೇಶದ ಯುವಕರ ಆಕಾಂಕ್ಷೆಗಳಿಗೆ ಅನುಸಾರವಾಗಿದ್ದು, ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವವರ ವಿರುದ್ಧ ದೆಹಲಿ ಪೊಲೀಸರು ಕೈಗೊಳ್ಳುತ್ತಿರುವ ವಿವೇಚನಾರಹಿತ ಕ್ರಮವನ್ನು ಕೂಡಲೇ ನಿಲ್ಲಿಸಬೇಕು' ಎಂದು ಒತ್ತಾಯಿಸಲಾಗಿದೆ.

