ಉಪ್ಪಳ: ರಾಷ್ಟ್ರ ಸಂರಕ್ಷಣೆ ಸೈನಿಕರಲ್ಲಷ್ಟೇ ನಿಕ್ಷಿಪ್ತವಾಗದೆ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾದಾಗ ಸಂತುಷ್ಠ ರಾಷ್ಟ್ರ ನಿರ್ಮಾಣವಾಗುತ್ತದೆ. ದೇಶ ವಿಭಜನೆಯ ಬಳಿಕ ಗಡಿಗಳಲ್ಲಿ ಉಂಟಾಗುವ ವಿದ್ವಂಸಕ ಕೃತ್ಯ, ಭಯೋತ್ಪಾದನೆ ಮತ್ತು ದಾಳಿಗಳಿಗೆ ಭಾರತದ ಸೇನೆ ಸಮರ್ಥ ಉತ್ತರಗಳನ್ನು ನೀಡಿದೆ. ಕಾರ್ಗಿಲ್ ವಿಜಯ ಭಾರತದ ಸೇನಾ ವಲಯದಲ್ಲಿ ಅತ್ಯುನ್ನತ ವಿಜಯ ಮಾಲೆ ಎಂದು ಜೀವಂತ ದಂತಕಥೆ, ಪರಮ ವೀರ ಚಕ್ರ ಸುಬೇದಾರ್ ಮೇಜರ್ ಕ್ಯಾಪ್ಟನ್ ಯೋಗೇಂದ್ರ ಸಿಂಗ್ ಯಾದವ್ ತಿಳಿಸಿದರು.
ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಗಾಯತ್ರೀ ಮಂಟಪದಲ್ಲಿ ಭಾನುವಾರ ನಡೆದ ಕಾರ್ಗಿಲ್ ವಿಜಯ ದಿವಸ್ ಸಮಾರಂಭದಲ್ಲಿ ವಿಶೇಷ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಕಾಶ್ಮೀರದ ದ್ರಾಸ್, ಕಾರ್ಗಿಲ್, ಎಲ್.ಒ.ಸಿ, ಪುಲ್ವಾಮಾ, ದ್ರಾಸ್, ಕಪ್ವಾರಾ, ಅನಂತನಾಗ್, ಕುಲ್ಗಾಮ್, ಬಾರಾಮುಲ್ಲದಂತಹ ಕಠಿಣ ಉಗ್ರ ಉಪಟಳದ ಪ್ರದೇಶಗಳಲ್ಲಿ ಸೈನಿಕರ ಪ್ರಬಲ ಉಪ್ರಮಗಳಿಂದ ಉಗ್ರರಿಗೆ ತಲೆಯೆತ್ತಲು ಆಸ್ಪದವಾಗುವ ಪರಿಸ್ಥಿತಿಗಳು ಈಗಿಲ್ಲ. 1998ರ ಕಾರ್ಗಿಲ್ ಕದನದಲ್ಲಿ ಘಾಟಕ್ ಕಮಾಂಡರ್ ತಂಡಕ್ಕೆ ಟೈಗರ್ ಹಿಲ್ ಬಂಕರ್ ಗಳನ್ನು ನಾಶಪಡಿಸಲು ಆದೇಶ ನೀಡಲಾಗಿತ್ತು. ಆ ವೇಳೆ ಕಡಿದಾದ ಹಿಮದ ಬಂಡೆಗಳನ್ನೇರಿ, ಮೇಲಕ್ಕೆ ಹಗ್ಗಗಳನ್ನು ಕಟ್ಟಿ ಮಾರ್ಗಮಾಡಿಕೊಂಡು ಮೇಲೇರಿದ ನೆನಪುಗಳನ್ನು ಕ್ಯಾಪ್ಟನ್ ಯೋಗೇಂದ್ರ ಸಿಂಗ್ ಯಾದವ್ ನೆನಪಿಸಿದರು. 15ಕ್ಕೂ ಹೆಚ್ಚು ಗುಂಡುಗಳು ತಾಗಿದ್ದರೂ ಅತಿಯಾದ ರಕ್ತಸ್ರಾವದ ನಡುವೆಯೂ ತೆವಳುತ್ತಾ ಹೋಗಿ ಶತ್ರುಗಳ ಬಂಕರ್ ಗಳನ್ನು ಪುಡಿಗಟ್ಟಿದಾಗಿನ ಘಟನೆಗಳನ್ನು ಸ್ಮರಿಸಿದ ಅವರು, 16 ತಿಂಗಳ ಜೀವನ್ಮರಣ ಹೋರಾಟದ ಬಳಿಕ ಬದುಕಿ ಬಂದಿರುವುದು ಈ ದೇಶಕ್ಕೆ ನೀಡಿದ ಸೇವೆಯ ಹರಕೆಯಿಂದ. ಈ ಮಣ್ಣಿನ ಋಣ ತೀರಿಸುವ ಉತ್ಸಾಹ ನಮ್ಮಮನ್ನು ಮತ್ತಷ್ಟು ಜೀವನೋತ್ಸಾಹಿಗಳನ್ನಾಗಿಸುತ್ತದೆ. ಯಾವ ಹಂತದಲ್ಲೂ ದೃತಿಗೆಡದೆ ಮುಂದುವರಿಯುವವನು ಗೆಲ್ಲುತ್ತಾನೆ. ರಾಷ್ಟ್ರಸೇವೆಗೆ ಸಮರ್ಪಿತ ಜೀವನಕ್ಕೆ ಅಂತ್ಯವಿಲ್ಲ ಎಂದವರು ಗದ್ಗದಿತರಾಗಿ ತಿಳಿಸಿದರು.
ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಸ್ಥಿತರಿದ್ದ ಕೊಂಡೆವೂರು ಮಠಾಧೀಶ ಶ್ರೀಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ರಾಷ್ಟ್ರ ಶಸ್ತ್ರ, ಶಾಸ್ತ್ರ ಎರಡಕ್ಕೂ ಮಹತ್ವ ನೀಡಿದೆ. ಇವೆರಡೂ ಜೊತೆಯಾದಾಗ ಸೌಖ್ಯದ ಜೀವನ ಲಕ್ಷ್ಯ ಪ್ರಾಪ್ತಿಯಾಗುತ್ತದೆ. ಯೋಗಿ ಮತ್ತು ಯೋಧನ ಆಶಯಗಳೆರಡೂ 'ಪರ' ತತ್ವದಡಿಯಲ್ಲಿ ಮಿಳಿತವಾದುದು. ಪ್ರತಿಯೊಬ್ಬರೂ ರಾಷ್ಟ್ರ ಚಿಂತನೆಯನ್ನು ಬೆಳೆಸಬೇಕು ಎಂದರು.
ಮಾಜಿ ರಾಜ್ಯಸಭಾ ಸದಸ್ಯ ಕೆ.ನಾರಾಯಣ್ ಬೆಂಗಳೂರು, ನಿವೃತ್ತ ಸೈನಿಕ ವಲಯ ಕೊಲ್ಯದ ಕ್ಯಾಪ್ಟನ್ ಹರಿಪ್ರಸಾದ್ ಜಿ.ಎಸ್., ಉದುಮ ವಲಯ ಸೈನಿಕ ಸಂಘದ ಹವಾಲ್ದಾರ್ ಪಿಪಿ ಕೃಷ್ಣನ್, ಜಿ.ಎಸ್.ಪ್ರಕಾಶ್, ನಿತ್ಯಾನಂದ ಮಹಾಪೀಠಮ್ ವಿಶ್ವಸ್ಥ ಮೋನಪ್ಪ ಭಂಡಾರಿ ಮಂಗಳೂರು, ಶಶಿಧರ ಶೆಟ್ಟಿ ಗ್ರಾಮ ಚಾವಡಿ, ವಿಶ್ವನಾಥನ ವೆಂಗರ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು. ಕೇರಳ ರಾಜ್ಯ ಸೈನಿಕ ಸಂಘ, ನಿವ್ತತ್ತ ಸೈನಿಕರ ಸಂಘ ಅಬ್ಬಕ್ಕ ವಲಯ ಕೊಲ್ಯ ಸಹಯೋಗ ನೀಡಿದ ಕಾರ್ಯಕ್ರಮದಲ್ಲಿ ಮಾಜಿ ಸೈನಿಕ ವಿಜಯನ್ ಸ್ವಾಗತಿಸಿ, ದಿನಕರ ಹೊಸಂಗಡಿ ವಂದಿಸಿದರು. ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ ಸನ್ಮಾನ ಪತ್ರ ವಾಚಿಸಿದರು. ವಕೀಲ ಗಂಗಾಧರ ಕೊಂಡೆವೂರು ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಶ್ರೀಸ್ವಾಮೀಜಿಯವರಿಂದ ಅಮರ್ ಜವಾನ್ ಜ್ಯೋತಿ ಪ್ರಜ್ವಲನೆ, ಪುಷ್ಪಾರ್ಚನೆ, ನಿತ್ಯಾನಂದ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ನೃತ್ಯ ರೂಪಕ ನಡೆಯಿತು.

