ಪೆರ್ಲ: ಕೇರಳ-ಕರ್ನಾಟಕ ಗಡಿ ಪ್ರದೇಶ ಹಂದಿಕೊಂಡಿರುವ ಎಣ್ಮಕಜೆ ಪಂಚಾಯಿತಿಯ ಚವರ್ಕಾಡಿನಲ್ಲಿ ಅಂಚೆ ಕಚೇರಿ ಆರಂಭಿಸುವಂತೆ ಸ್ಥಳೀಯ ನಾಗರಿಕರು ಇಲಾಖೆ ಅಧಿಕಾರಿಗಳನ್ನು ಆಗ್ರಹಿಸಿದ್ದಾರೆ. ಪಂಚಾಯಿತಿಯ ಒಂದು ಹಾಗೂ ಎರಡನೇ ವಾರ್ಡು ಒಳಗೊಂಡ ಈ ಪ್ರದೇಶ ಭೌಗೋಳಿಕವಾಗಿ ಕೇರಳದಲ್ಲಿ ಗುರುತಿಸಿಕೊಂಡಿದ್ದರೂ, ಇಲ್ಲಿನ ಜನತೆ ವ್ಯವಹಾರಗಳಿಗೆ ಕರ್ನಾಟಕವನ್ನೇ ಆಶ್ರಯಿಸುತ್ತಿದ್ದಾರೆ. ಅಡ್ಯನಡ್ಕ ಇವರಿಗೆ ಸನಿಹದ ಪೇಟೆಯಾಗಿದ್ದು, ಪತ್ರ ವ್ಯವಸಹಾರಗಳಿಗೆ ಕರ್ನಾಟಕದಲ್ಲಿರುವ ಅಂಚೆ ಕಚೇರಿಯನ್ನೇ ಆಶ್ರಯಿಸಿಕೊಂಡಿರಬೇಕಾದ ಅನಿವಾರ್ಯತೆಯಿದೆ. ಇದರಿಂದ ಇವರಿಗೆ ಅಂಚೆ ಸೇವೆಗಳು ವಿಳಂಬವಾಗುತ್ತಿರುವುದಲ್ಲದೆ, ಕೆಲವೊಂದು ಸವಲತ್ತುಗಳೂ ಕೈತಪ್ಪಲು ಕಾರಣವಾಗುತ್ತಿದೆ.
ಭೌಗೋಳಿಕವಾಗಿಯೂ ಇಲ್ಲಿನ ಜನತೆ ಸಮಸ್ಯೆ ಎದುರಿಸುತ್ತಿದ್ದಾರೆ. ಪೆರ್ಲದಿಂದ ನಲ್ಕ-ಬಿರ್ಮೂಲೆ ಮೂಲಕ ಬಾಕಿಲಪದವು ಹೊಳೆ ದಾಟಿ ಆರೇಳು ಕಿ.ಮೀ ಪ್ರಯಾಣದಲ್ಲಿ ಚವರ್ಕಾಡು ತಲುಪಬಹುದಾದ ದೂರವನ್ನು 15ಕಿ.ಮೀಗೂ ಹೆಚ್ಚು ಸುತ್ತುಬಳಸಿ ತಲುಪದಬೇಕಾಗಿದೆ. ಬಾಕಿಲಪದವು ಹೊಳೆಗೆ ಸೇತುವೆ ನಿರ್ಮಾಣವಾದಲ್ಲಿ ಈ ಸಮಸ್ಯೆಗೆ ಪರಿಹಾರ ಲಭಿಸಬಹುದಾಗಿದ್ದರೂ, ಸೇತುವೆ ನಿರ್ಮಾಣಕಾರ್ಯ ಇನ್ನೂ ಅತಂತ್ರ ಸ್ಥಿತಿಯಲ್ಲಿದೆ. ಇನ್ನೊಂದೆಡೆ ಬಾಕಿಲಪದವಿಗೆ ಮಂಜೂರುಗೊಂಡಿರುವ ಸೇತುವೆ ಕಾಮಗಾರಿ ಶೀಘ್ರ ಆರಂಭಿಸುವಂತೆಯೂ ಜನತೆ ಆಗ್ರಹಿಸಿದ್ದಾರೆ.
ಕರೊನಾ ಕಾಲಾವಧಿಯಲ್ಲಿ ಸಾಯ, ಚವರ್ಕಾಡು ಜನತೆ ಎದುರಿಸಿದ್ದ ಸಮಸ್ಯೆ ಅಷ್ಟಿಷ್ಟಲ್ಲ. ಇಲ್ಲಿನ ಜನತೆಗೆ ಮಳೆಗಾಲದಲ್ಲಿ ಬಾಕಿಲಪದವು ಹೊಳೆ ದಾಟಿ ತೆರಳಲಾಗದೆ, ಸಾರಡ್ಕ ಗೇಟ್ ಮೂಲಕ ಸಾಗಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು. ಅಂದು ಕೋವಿಡ್ ಹಿನ್ನೆಲೆಯಲ್ಲಿ ಅಂತಾರಾಜ್ಯ ಗಡಿಪ್ರದೇಶ ಸಾರಡ್ಕ ಗೇಟನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರಿಂದ ಚವರ್ಕಾಡು-ಸಾಯ ಪ್ರದೇಶದ ಜನತೆ ಪ್ರಾಯಶ: ದ್ವೀಪಸದೃಶ ಜೀವನ ನಡೆಸುವಂತಾಗಿತ್ತು. ಇಲ್ಲಿನ ಜನತೆಗೆ ರೇಶನ್, ಅಂಚೆ, ಬ್ಯಾಂಕ್, ಪಂಚಾಯಿತಿ ಸೇರಿದಂತೆ ಪ್ರತಿಯೊಂದು ಸರ್ಕಾರಿ ಸವಲತ್ತುಗಳಿಗೆ ಪೆರ್ಲ ಪೇಟೆಯನ್ನು ಆಶ್ರಯಿಸಬೇಕಾಗಿದ್ದು, ಕರೊನಾ ಕಾಲಘಟ್ಟದಲ್ಲಿ ಹೆಚ್ಚಿನ ಸಂಕಷ್ಟ ಅನುಭವಿಸಿದ್ದರು.
ಕೇರಳದ ತುತ್ತ ತುದಿಯ ತಿರುವನಂತಪುರದ ಶಕ್ತಿಕೇಂದ್ರದಲ್ಲಿ ಕುಳಿತ ನಮ್ಮನ್ನಾಳುವವರಿಗೆ ಸಾಯ ಪ್ರದೇಶದ ಜನತೆಯ ಮೊರೆ ಕೇಳಿಸಲೇ ಇಲ್ಲ. ಕರೊನಾ ಕಾಲಘಟ್ಟದಲ್ಲಿ ಸಾಯ ಪ್ರದೇಶಕ್ಕೆ ರೇಶನ್ ಅಂಗಡಿ ಮಂಜೂರು ಮಾಡುವುದಾಗಿ ಲಭಿಸಿದ್ದ ಭರವೆ ಇದುವರೆಗೆ ಈಡೇರಿಲ್ಲ. ಪ್ರಸಕ್ತ ಅಂಚೆ ಕಚೇರಿ ಸೌಲಭ್ಯವಿಲ್ಲದೆ ಸಂಕಷ್ಟ ಅನುಭವಿಸುತ್ತಿರುವ ಇಲ್ಲಿನ ಜನತೆಯ ಬೇಡಿಕೆ ಈಡೇರಿಸಲು ಸರ್ಕಾರ ಹಾಗೂ ಅಂಚೆ ಇಲಾಖೆ ಮುಂದಾಗಬೇಕಾಗಿದೆ.
ಕೇರಳ-ಕರ್ನಾಟಕ ಗಡಿ ಗ್ರಾಮವಾದ ಚವರ್ಕಾಡಿನಲ್ಲಿ ಹೊಸ ಅಂಚೆ ಕಚೇರಿ ಮಂಜೂರು ಮಾಡಬೇಕೆಂಬುದು ದೀರ್ಘ ಕಾಲದ ಬೇಡಿಕೆಯಾಗಿದೆ. ಎಣ್ಮಕಜೆ ಪಂಚಾಯಿತಿಯ ಒಂದು ಮತ್ತು ಎರಡನೇ ವಾರ್ಡು ಒಳಗೊಂಡ ಪ್ರದೇಶದಲ್ಲಿ ಅಂಚೆ ಸೌಲಭ್ಯವಿಲ್ಲದೆ ನೂರಾರು ಜನ ಸಂಕಷ್ಟ ಅನುಭವಿಸುತ್ತಿದ್ದಾರೆ.



