ಕುಂಬಳೆ: ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ ಹಾಗೂ ಮುಜುಂಗಾವು ಶ್ರೀ ಭಾರತಿ ವಿದ್ಯಾ ಪೀಠ ಶಾಲಾ ಮಂಡಳಿಯ ಸಹಯೋಗದಲ್ಲಿ ವಿದ್ಯಾರ್ಥಿಗಳಿಗಾಗಿ ಆನ್‍ಲೈನ್ ಗೂಗಲ್ ಮೀಟ್ ಮೂಲಕ ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು. ವಿಶ್ವ ಮಾದಕ ವಸ್ತು ವಿರೋಧಿ ದಿನಾಚರಣೆ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಯಿತು.
ಪೂಜ್ಯ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಮಾತೃಶ್ರೀ ಹೇಮಾವತಿ ಅಮ್ಮನವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯೋಜನೆಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅನಿಲ್ ಕುಮಾರ್ ಎಸ್ ಎಸ್ ಪ್ರಾಸ್ತಾವಿಕ ನುಡಿಯೊಂದಿಗೆ ಮಾಹಿತಿ ನೀಡಿದರು. ಡಾ. ದೇವಿಪ್ರಸಾದ್ ಶೆಟ್ಟಿ, ಬೆಂಗಳೂರು, ಡಾ. ವೆಂಕಟೇಶ್ ಪ್ರಸಾದ್ ಎಸ್ ಪಿ ಬೆಂಗಳೂರು ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮ ಹಾಗೂ ನಿರಂತರ ಸೇವನೆಯಿಂದ ಜನರು ಸಾವಿನ ಅಂಚಿಗೆ ಸಾಗುವ ಮೂಲಕ ಜೀವನ ಕಳೆದುಕೊಳ್ಳುತ್ತಿರುವ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.
ಶಾಲಾ ಮುಖ್ಯ ಶಿಕ್ಷಕ ಶ್ಯಾಮ್ ಭಟ್, ಸಹ ಮುಖ್ಯ ಶಿಕ್ಷಕಿ ಚೈತ್ರ ಸರಸ್ವತಿ, ತಾಲೂಕು ಯೋಜನಾಧಿಕಾರಿ ಶಶಿಕಲಾ ಸುವರ್ಣ, ವಲಯ ಜನಜಾಗೃತಿ ಅಧ್ಯಕ್ಷ ಮಹೇಶ್ ಪುಣಿಯೂರು, ಮೇಲ್ವಿಚಾರಕ ಅಭಿಷೇಕ್, ಸೇವಾಪ್ರತಿನಿಧಿ ಸ್ವರ್ಣಲತಾ, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



