ಕಾಸರಗೋಡು: ನಗರದ ಗುಡ್ಡೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪೂರ್ತಿ ಶಿಲಾಮಯ ಗರ್ಭಗುಡಿ ಹಾಗೂ ನಮಸ್ಕಾರ ಮಂಟಪ ನಿರ್ಮಾಣಕ್ಕಾಗಿ ಕ್ಷೇತ್ರದ ಪ್ರಮುಖ ಕಾರ್ಯ ಪಾದುಕಾನ್ಯಾಸ ಜುಲೈ 3ರಂದು ಜರುಗಲಿದೆ. ಕಾರ್ಯಕ್ರಮದ ಯಶಸ್ವಿಗಾಗಿ ಜೀರ್ಣೋದ್ಧಾರ ಸಮಿತಿಯ ಸಮಾಲೋಚನಾ ಸಭೆ ಶ್ರೀ ಕ್ಷೇತ್ರದಲ್ಲಿ ಜರುಗಿತು.
ಕಾರ್ಯಕ್ರಮದ ಅಂಗವಾಗಿ ಸಾಮೂಹಿಕ ಶಿವ ಪಂಚಾಕ್ಷರಿ ಪಠಣ ಜರುಗಿತು. ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷ ಡಾ. ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ತಂತ್ರಿವರ್ಯರಾದ ಉಚ್ಚಿಲತ್ತಾಯ ಶ್ರೀ ಪದ್ಮನಾಭ ತಂತ್ರಿವರ್ಯರ ಕಾರ್ಮಿಕತ್ವದಲ್ಲಿ ಪ್ರಶ್ನಾ ಚಿಂತನೆಯಲ್ಲಿ ಕಂಡ ಪ್ರಕಾರ ಪರಿಹಾರಾರ್ಥ 3ರಂದು ಬೆಳಗ್ಗೆ 108 ನಾಳೀಕೇರ ಗಣಪತಿ ಹವನ, ಮೃಂತ್ಯುಂಜಯ ಹವನ ಮಧ್ಯಾಹ್ನ 12.14 ರ ಶುಭ ಮುಹೂರ್ತದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯ ಪೀಠ ಎಡನೀರು ಸಂಸ್ಥಾನದ ಪೀಠಾಧಿಪತಿಗಳಾದ ಶ್ರೀ ಸಚ್ಚಿದಾನಂದ ಭಾರತೀ ಸವಾಮೀಜಿ ಅವರ ದಿವ್ಯಹಸ್ತದಿಂದ ಪಾದುಕಾನ್ಯಾಸ ಕಾರ್ಯಕ್ರಮ ಜರಗಲಿದೆ. ಇದೇ ಸಂದರ್ಭ ದೇವಸ್ಥಾನ ವಠಾರದಲ್ಲಿ ನಿರ್ಮಿಸಲಾದ ಸೇವಾಕಚೇರಿಯನ್ನು ಮಂಗಳೂರಿನ ಉದ್ಯಮಿ ಎಸ್.ಎಲ್.ಡೈಮೆಂಡ್ ಹೌಸ್‍ನ ರವೀಂದ್ರ ಶೇಟ್ ಉದ್ಘಾಟಿಸುವರು.


