ಡೆಹ್ರಾಡೂನ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಪಾಲ್ಗೊಳ್ಳಬೇಕಿದ್ದ ಸಮಾವೇಶಕ್ಕಾಗಿ ಟೆಂಟ್ ಹಾಕುತ್ತಿದ್ದ ವೇಳೆ ಕಬ್ಬಿಣದ ರಾಡ್ ಬಿದ್ದು, ಕಾರ್ಯಕರ್ತರೊಬ್ಬರು ಮೃತಪಟ್ಟಿದ್ದಾರೆ.
ಗುರುವಾರ ಈ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು 65 ವರ್ಷದ ಅಮರ್ ಮೆಹ್ತಾ ಎಂದು ಗುರುತಿಸಲಾಗಿದೆ.
ಡೆಹ್ರಾಡೂನ್‌ನ ಬನ್ನು ಶಾಲಾ ಮೈದಾನದಲ್ಲಿ ಟೆಂಟ್ ಹಾಕಲಾಗುತ್ತಿತ್ತು. ಮೆಹ್ತಾ ಅವರು ಸಿದ್ಧತೆಯ ಮೇಲ್ವಿಚಾರಣೆ ನಡೆಸುತ್ತಿದ್ದರು. ಆ ವೇಳೆ ಕಬ್ಬಿಣದ ರಾಡ್ ತಲೆ ಮೇಲೆ ಬಿದ್ದಿದೆ ಎಂದು ಕಾಂಗ್ರೆಸ್ ರಾಜ್ಯ ಘಟಕದ ಉಪಾಧ್ಯಕ್ಷ ಸೂರ್ಯಕಾಂತ್ ಸೂರ್ಯಕಾಂತ್ ಧಾಸ್ಮಾನಾ ತಿಳಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿದ್ದ ಮೆಹ್ತಾ ಅವರನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದರು ಎಂಬುದನ್ನು ವೈದ್ಯರು ಖಚಿತಪಡಿಸಿದರು ಎಂದೂ ಸೂರ್ಯಕಾಂತ್ ಹೇಳಿದ್ದಾರೆ.
ಬನ್ನು ಶಾಲಾ ಮೈದಾನದಲ್ಲಿ ಶುಕ್ರವಾರ ಆಯೋಜನೆಗೊಂಡಿರುವ 'ಛಾತ್ರೋಂ ಕಿ ಗೂಂಜ್' (ವಿದ್ಯಾರ್ಥಿಗಳ ಧ್ವನಿ) ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಇತ್ತೀಚೆಗೆ ದೇಶದಾದ್ಯಂತ ವಿವಾದ ಸೃಷ್ಟಿಸಿದ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ವಿವಿಧ ವಿಚಾರಗಳ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

