ತಿರುವನಂತಪುರಂ: ಪಲೋಡ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ (ಅಊಅ) ಸೋಮವಾರ ವಿದ್ಯುತ್ ಕಡಿತದ ವೇಳೆ ಮೊಬೈಲ್ ಫೋನ್ ನ ಫ್ಲ್ಯಾಷ್ ಲೈಟ್ ಬೆಳಕಿನಲ್ಲಿ ರೋಗಿಯೊಬ್ಬರ ಗಾಯಕ್ಕೆ ಹೊಲಿಗೆ ಹಾಕಿದ ಘಟನೆ ಬೆನ್ನಲ್ಲೇ, ಕೇರಳಂ ಆರೋಗ್ಯ ಸಚಿವ ಕೆ. ಮುರಳೀಧರನ್ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ವಿದ್ಯುತ್ ಕಡಿತದ ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ನಡೆಸಬಾರದು. ವಿದ್ಯುತ್ ಪೂರೈಕೆ ಪುನಃಸ್ಥಾಪನೆಯಾದ ಬಳಿಕವೇ ಶಸ್ತ್ರಚಿಕಿತ್ಸೆ ನಡೆಸಬೇಕು ಎಂದು ಮುರಳೀಧರನ್ ಹೇಳಿದ್ದಾರೆ. ವಿದ್ಯುತ್ ಕಡಿತವು ಕೇವಲ ಅರ್ಧ ಗಂಟೆಯಷ್ಟೇ ಇದ್ದರೆ, ಅಷ್ಟರೊಳಗೆ ಕಾಯ್ದು ನಂತರ ಶಸ್ತ್ರಚಿಕಿತ್ಸೆ ನಡೆಸಬಹುದು ಎಂದು ಅವರು ಹೇಳಿದ್ದಾರೆ.
"ವಿದ್ಯುತ್ ಕಡಿತವಿದ್ದರೆ ಶಸ್ತ್ರಚಿಕಿತ್ಸೆಗಳನ್ನು ಮಾಡಬಾರದು. ಅವುಗಳನ್ನು ನಂತರ ನಡೆಸಬೇಕು. ಆಸ್ಪತ್ರೆಯಲ್ಲಿ ಜನರೇಟರ್ ಕಾರ್ಯನಿರ್ವಹಿಸುತ್ತಿಲ್ಲ ಎಂಬ ವಿಚಾರವನ್ನು ಮೊದಲೇ ಗಮನಿಸಬೇಕಿತ್ತು. ಈ ಘಟನೆ ಕುರಿತು ತನಿಖೆ ನಡೆಸುವಂತೆ ಆರೋಗ್ಯ ಸೇವೆಗಳ ನಿರ್ದೇಶಕರಿಗೆ (ಆಊS) ಸೂಚಿಸಿದ್ದೇನೆ," ಎಂದು ಸಚಿವರು ತಿಳಿಸಿದ್ದಾರೆ.
"ಇಂದಿನ ಪರಿಸ್ಥಿತಿಯಲ್ಲಿ ವಿದ್ಯುತ್ ಕಡಿತ ಅನಿವಾರ್ಯವಾಗಿತ್ತು. ಈ ಕುರಿತು ವಿದ್ಯುತ್ ಸಚಿವರು ಮೊದಲೇ ಮಾಹಿತಿ ನೀಡಿದ್ದರು. ವಿದ್ಯುತ್ ಕಡಿತ ಕೇವಲ ಅರ್ಧ ಗಂಟೆಯಷ್ಟೇ ಇರುತ್ತದೆ. ಆದ್ದರಿಂದ ವಿದ್ಯುತ್ ಬಂದ ಬಳಿಕ ಶಸ್ತ್ರಚಿಕಿತ್ಸೆ ನಡೆಸಬಹುದು," ಎಂದೂ ಅವರು ಹೇಳಿದ್ದಾರೆ.
ಸೋಮವಾರ ಪಲೋಡ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ವಿದ್ಯುತ್ ಕಡಿತಗೊಂಡಾಗ ಜನರೇಟರ್ ಕಾರ್ಯನಿರ್ವಹಿಸದ ಕಾರಣ ವೈದ್ಯರು ಮೊಬೈಲ್ ಫೋನ್ ನ ಫ್ಲ್ಯಾಷ್ ಲೈಟ್ ಬೆಳಕಿನಲ್ಲೇ ರೋಗಿಯ ಗಾಯಕ್ಕೆ ಹೊಲಿಗೆ ಹಾಕಿದ್ದರು. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಆಸ್ಪತ್ರೆಗಳಲ್ಲಿನ ತುರ್ತು ವಿದ್ಯುತ್ ಬ್ಯಾಕಪ್ ವ್ಯವಸ್ಥೆ ಕುರಿತು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಈ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಆರೋಗ್ಯ ಸೇವೆಗಳ ನಿರ್ದೇಶಕರಿಗೆ ಸಚಿವರು ಸೂಚಿಸಿದ್ದು, ಆಸ್ಪತ್ರೆಯಲ್ಲಿ ಜನರೇಟರ್ ಕಾರ್ಯನಿರ್ವಹಿಸದಿರುವ ಕಾರಣಗಳನ್ನೂ ಪರಿಶೀಲಿಸಲಾಗುತ್ತಿದೆ.

