ಪತ್ತನಂತಿಟ್ಟ: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರದ ನೂತನ ತಂತ್ರಿವರ್ಯರಾಗಿ ಕಂಠರರ್ ರಾಜೀವರ್ ಅವರ ಪುತ್ರ ಕಂಠರರ್ ಬ್ರಹ್ಮದತ್ತನ್ ಅವರನ್ನು ನೇಮಕಮಾಡಲಾಗಿದೆ. ತಿರುವಾಂಕೂರು ದೇವಸ್ವಂ ಮಂಡಳಿಯ (ಬೋರ್ಡ್) ಕೇಂದ್ರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.
ದೇವಸ್ವಂ ಮಂಡಳಿಯ ಅಧ್ಯಕ್ಷ ಕೆ. ಜಯಕುಮಾರ್, ಮಂಡಳಿಯ ಸದಸ್ಯರಾದ ಕೆ. ರಾಜು ಮತ್ತು ಪಿ.ಡಿ. ಸಂತೋಷ್ ಕುಮಾರ್ ಉಪಸ್ಥಿತರಿದ್ದರು. ಸಿಂಹ ಮಾಸ 1 ರಿಂದ ಬ್ರಹ್ಮದತ್ತನ್ ಶಬರಿಮಲೆ ಕ್ಷೇತ್ರದಲ್ಲಿ ತಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ತಮ್ಮ ಆರೋಗ್ಯ ಸಮಸ್ಯೆಗಳ ಕಾರಣದಿಂದಾಗಿ ತಮ್ಮ ಬದಲಿಗೆ ತಾಂತ್ರಿಕ ಸ್ಥಾನವನ್ನು ಮಗನಿಗೆ ನೀಡಬೇಕೆಂದು ಕೋರಿ ಕಂಠರರ್ ರಾಜೀವರ್ ದೇವಸ್ವಂ ಮಂಡಳಿಗೆ ಪತ್ರ ಬರೆದಿದ್ದರು.
ಸಿಂಹ ಮಾಸ 1ರಿಂದ(2026 ಆ. 16ರಿಂದ) ಮುಂದಿನ ಕರ್ಕಡಕಂ ತಿಂಗಳ(2027 ಜುಲೈ 16)ವರೆಗೆ ತಾಯಮಣ್ ಮಠದ ಎರಡು ಕುಟುಂಬಗಳು ಸರದಿಯ ಆಧಾರದ ಮೇಲೆ ಶಬರಿಮಲೆಯಲ್ಲಿ ತಾಂತ್ರಿಕ ಕಾರ್ಯಗಳನ್ನು ನೆರವೇರಿಸಲಿವೆ. ಹಿರಿಯ ತಂತ್ರಿ ಕಂಠರರ್ ಮೋಹನರರ್, ಅವರ ಪುತ್ರ ಕಂಠರರ್ ಮಹೇಶ್ ಮೋಹನರರು ಪ್ರಸಕ್ತ ಶಬರಿಮಲೆ ಕ್ಷೇತ್ರದಲ್ಲಿ ತಂತ್ರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಅಧಿಕಾರಾವಧಿಯು ಆಗಸ್ಟ್ 2 ರಂದು ನಿರಪುತ್ತರಿ ಪೂಜೆಗಳೊಂದಿಗೆ ಮುಕ್ತಾಯಗೊಳ್ಳಲಿದೆ.
ಹೈಕೋರ್ಟ್ ಅನುಕೂಲಕರ ನಿರ್ಧಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಸಿಂಹ ಮಾಸದ ಪೂಜೆಗಳಿಗಾಗಿ ಗರ್ಭಗುಡಿಯ ಬಾಗಿಲು ತೆರೆಯುವ ಆಗಸ್ಟ್ 16 ರಿಂದ ಕಂಠರರು ಬ್ರಹ್ಮದತ್ತನ್ ನೂತನ ತಂತ್ರಿಗಳಾಗಿ ಸ್ಥಾನಾರೋಹಣ ನಡೆಸಲಿದ್ದಾರೆ.

.jpg)
