ಭಾರತ, ಕೆನಡಾ ಮತ್ತು ಅಮೆರಿಕದಾದ್ಯಂತ ಕಾರ್ಯಾಚರಣೆ ನಡೆಸುತ್ತಿರುವ ಅಂತರರಾಷ್ಟ್ರೀಯ ಸಂಘಟಿತ ಅಪರಾಧ ಜಾಲದ ಭಾಗವಾಗಿದ್ದಾರೆ ಎಂದು ಆರೋಪಿಸಿ, ಸದ್ಯ ಜೈಲಿನಲ್ಲಿರುವ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್, ಪಂಜಾಬ್ ಪೊಲೀಸ್ ಎಸ್‌ಎಚ್‌ಒ ಗುರಿಂದರ್ಜಿತ್ ಸಿಂಗ್ ನಾಗ್ರಾ ಮತ್ತು ಇತರ ಹಲವರ ವಿರುದ್ಧ ಅಮೆರಿಕದ ನ್ಯಾಯಾಂಗ ಇಲಾಖೆಯು ಸುಲಿಗೆ, ಕೊಲೆ ಮತ್ತು ಸಂಚು ರೂಪಿಸಿದ ಗಂಭೀರ ಆರೋಪಗಳನ್ನು ಹೊರಿಸಿದೆ.
ಬಿಷ್ಣೋಯ್ ಮತ್ತು ನಾಗ್ರಾ ಇಬ್ಬರೂ ಸದ್ಯ ಭಾರತದಲ್ಲಿರುವುದರಿಂದ, ವಾಷಿಂಗ್ಟನ್ ಇವರ ಹಸ್ತಾಂತರವನ್ನು ಕೋರಿ ಅಧಿಕೃತ ಮನವಿಗಳನ್ನು ಸಲ್ಲಿಸುವ ನಿರೀಕ್ಷೆಯಿದೆ.
ಒಂದು ವೇಳೆ ಇಂತಹ ಮನವಿಗಳು ಬಂದರೆ, ಮುಂದಿನ ಕಾನೂನು ಪ್ರಕ್ರಿಯೆ ಹೇಗಿರುತ್ತದೆ? ಭಾರತ-ಅಮೆರಿಕ ಒಪ್ಪಂದದ ಪ್ರಕಾರ ಈ ಆರೋಪಗಳು ಹಸ್ತಾಂತರದ ವ್ಯಾಪ್ತಿಗೆ ಬರುತ್ತವೆಯೇ? ಭಾರತವು ಈ ಇಬ್ಬರು ಆರೋಪಿಗಳನ್ನು ಹಸ್ತಾಂತರಿಸಲು ನಿರಾಕರಿಸಬಹುದೇ ಅಥವಾ ಅವರ ಹಸ್ತಾಂತರವನ್ನು ವಿಳಂಬಗೊಳಿಸಬಹುದೇ?
ಈ ಎಲ್ಲಾ ಪ್ರಶ್ನೆಗಳಿಗೆ ಭಾರತ-ಅಮೆರಿಕ ಹಸ್ತಾಂತರ ಒಪ್ಪಂದ ಮತ್ತು ಭಾರತದ ಹಸ್ತಾಂತರ ಕಾಯ್ದೆ, 1962ರಲ್ಲೇ ಉತ್ತರಗಳಿವೆ. ಈ ಇಡೀ ಪ್ರಕ್ರಿಯೆಯಲ್ಲಿ ಭಾರತದ ನ್ಯಾಯಾಲಯಗಳು ಮತ್ತು ಕೇಂದ್ರ ಸರ್ಕಾರ ಎರಡೂ ವಿಭಿನ್ನ ಪಾತ್ರಗಳನ್ನು ವಹಿಸುತ್ತವೆ.
ಭಾರತ ಮತ್ತು ಅಮೆರಿಕ ನಡುವಿನ ಹಸ್ತಾಂತರ ನಿಯಮಗಳೇನು?
ಭಾರತ ಮತ್ತು ಅಮೆರಿಕ ನಡುವಿನ ಹಸ್ತಾಂತರ ಪ್ರಕ್ರಿಯೆಯು 1997ರಲ್ಲಿ ಸಹಿ ಮಾಡಲಾದ ದ್ವಿಪಕ್ಷೀಯ ಹಸ್ತಾಂತರ ಒಪ್ಪಂದ ಮತ್ತು ಭಾರತದ ಹಸ್ತಾಂತರ ಕಾಯ್ದೆ, 1962ರ ಅಡಿಯಲ್ಲಿ ನಡೆಯುತ್ತದೆ. ಈ ಒಪ್ಪಂದದ ಮುಖ್ಯ ನಿಯಮವೆಂದರೆ 'ದ್ವಿಮುಖ ಅಪರಾಧ' (ಆuಚಿಟ ಅಡಿimiಟಿಚಿಟiಣಥಿ) ತತ್ವ. ಅಂದರೆ, ಆರೋಪಿಯ ಮೇಲಿರುವ ಅಪರಾಧಕ್ಕೆ ಎರಡೂ ದೇಶಗಳಲ್ಲಿ ಕನಿಷ್ಠ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯ ಜೈಲು ಶಿಕ್ಷೆ ವಿಧಿಸುವ ಕಾನೂನು ಇರಬೇಕು. ಆಗ ಮಾತ್ರ ಅದು ಹಸ್ತಾಂತರದ ವ್ಯಾಪ್ತಿಗೆ ಬರುತ್ತದೆ.
ರಾಜಕೀಯ ಅಪರಾಧಗಳಿಗಾಗಿ ಹಸ್ತಾಂತರ ಮಾಡುವುದನ್ನು ಈ ಒಪ್ಪಂದವು ತಡೆಯುತ್ತದೆ. ಆದರೆ ಕೊಲೆ, ಒತ್ತೆಯಾಳುಗಳನ್ನು ಇರಿಸಿಕೊಳ್ಳುವುದು, ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆಯಂತಹ ಗಂಭೀರ ಅಪರಾಧಗಳನ್ನು ಈ ವಿನಾಯಿತಿಯಿಂದ ಹೊರಗಿಡಲಾಗಿದೆ. ಅಂದರೆ, ಇಂತಹ ಅಪರಾಧಗಳನ್ನು ರಾಜಕೀಯ ಅಪರಾಧ ಎಂದು ಪರಿಗಣಿಸಲು ಬರುವುದಿಲ್ಲ. ಇನ್ನು, ಆರೋಪಿ ಭಾರತದ ಪ್ರಜೆಯಾಗಿದ್ದಾನೆ ಎಂಬ ಒಂದೇ ಕಾರಣಕ್ಕೆ ಹಸ್ತಾಂತರವನ್ನು ನಿರಾಕರಿಸುವಂತಿಲ್ಲ. ಇದರೊಂದಿಗೆ ಮತ್ತೊಂದು ಪ್ರಮುಖ ನಿಯಮವೆಂದರೆ, ಯಾವ ಅಪರಾಧಕ್ಕಾಗಿ ಹಸ್ತಾಂತರಕ್ಕೆ ಅನುಮತಿ ನೀಡಲಾಗಿದೆಯೋ, ಆ ನಿರ್ದಿಷ್ಟ ಅಪರಾಧಕ್ಕಾಗಿ ಮಾತ್ರ ಆರೋಪಿಯನ್ನು ವಿಚಾರಣೆಗೆ ಒಳಪಡಿಸಬೇಕಾಗುತ್ತದೆ.
ಬಿಷ್ಣೋಯ್ ಮತ್ತು ನಾಗ್ರಾ ಮೇಲಿನ ಆರೋಪಗಳು ಹಸ್ತಾಂತರಕ್ಕೆ ಅರ್ಹವೇ?
ಮೇಲ್ನೋಟಕ್ಕೆ, ಅಮೆರಿಕದ ಪ್ರಾಸಿಕ್ಯೂಟರ್‌ಗಳು ಹೊರಿಸಿರುವ ಆರೋಪಗಳು ಹಸ್ತಾಂತರ ಒಪ್ಪಂದದ ಮುಖ್ಯ ಕಾನೂನು ಅಗತ್ಯಗಳನ್ನು ಪೂರೈಸುವಂತೆ ಕಾಣಿಸುತ್ತವೆ.
ಅಮೆರಿಕದ ತನಿಖಾ ಸಂಸ್ಥೆಯು ತನ್ನ ದೋಷಾರೋಪ ಪಟ್ಟಿಯಲ್ಲಿ ಅಲ್ಲಿನ 'ರಿಕೋ' (ಖIಅಔ - ಖಚಿಛಿಞeಣeeಡಿ Iಟಿಜಿಟueಟಿಛಿeಜ ಚಿಟಿಜ ಅoಡಿಡಿuಠಿಣ ಔಡಿgಚಿಟಿizಚಿಣioಟಿs) ಕಾಯ್ದೆಯಂತಹ ಕಠಿಣ ಕಾನೂನುಗಳನ್ನು ಉಲ್ಲೇಖಿಸಿದೆ. ಆದರೆ, ಒಪ್ಪಂದದ 'ದ್ವಿಮುಖ ಅಪರಾಧ' ನಿಯಮದ ಪ್ರಕಾರ, ಎರಡೂ ದೇಶಗಳ ಕಾನೂನುಗಳು ಅಪರಾಧವನ್ನು ಒಂದೇ ಹೆಸರಿನಿಂದ ಕರೆಯಬೇಕು ಅಥವಾ ಒಂದೇ ವರ್ಗದಲ್ಲಿ ಇರಿಸಬೇಕು ಎಂಬ ನಿಯಮವಿಲ್ಲ ಎಂದು ಒಪ್ಪಂದವು ಸ್ಪಷ್ಟಪಡಿಸುತ್ತದೆ. ಇಲ್ಲಿ ಮುಖ್ಯವಾಗಿ ಗಮನಿಸುವ ಸಂಗತಿ ಏನೆಂದರೆ, ಆರೋಪಿಗಳು ನಡೆಸಿರುವ ಅಪರಾಧ ಕೃತ್ಯವು ಎರಡೂ ದೇಶಗಳ ವ್ಯಾಪ್ತಿಯಲ್ಲಿ ಗಂಭೀರ ಅಪರಾಧ ಹೌದೇ ಅಥವಾ ಅಲ್ಲವೇ ಎಂಬುದನ್ನು ಮಾತ್ರ ಪರಿಗಣಿಸಲಾಗುತ್ತದೆ. ಕೊಲೆ, ಅಪರಾಧ ಸಂಚು, ಸುಲಿಗೆ, ಮಾದಕವಸ್ತು ಕಳ್ಳಸಾಗಣೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಹೊಂದುವುದು ಭಾರತೀಯ ಕಾನೂನಿನ ಅಡಿಯಲ್ಲೂ ಶಿಕ್ಷಾರ್ಹ ಅಪರಾಧಗಳಾಗಿವೆ.
ಮುಂಬೈ ದಾಳಿಯ ಆರೋಪಿ ತಹವ್ವುರ್ ರಾಣಾ ಹಸ್ತಾಂತರ ಪ್ರಕ್ರಿಯೆಯು ಈ ನಿಯಮ ಹೇಗೆ ಕೆಲಸ ಮಾಡುತ್ತದೆ ಎಂಬುದಕ್ಕೆ ಸ್ಪಷ್ಟ ಉದಾಹರಣೆಯಾಗಿದೆ. ಭಾರತವು ರಾಣಾ ವಿರುದ್ಧ ಹೊರಿಸಿದ್ದ 'ದೇಶದ ವಿರುದ್ಧ ಯುದ್ಧ ಸಾರುವ ಸಂಚು' ನಂತಹ ಕೆಲವು ಆರೋಪಗಳನ್ನು ಅಮೆರಿಕದ ಪ್ರಾಸಿಕ್ಯೂಟರ್‌ಗಳು ಕೈಬಿಟ್ಟಿದ್ದರು. ಏಕೆಂದರೆ, ಅವು ಅಮೆರಿಕದ ಕಾನೂನಿನ ಪ್ರಕಾರ ದ್ವಿಮುಖ ಅಪರಾಧ ನಿಯಮಕ್ಕೆ ಹೊಂದಿಕೆಯಾಗುತ್ತಿರಲಿಲ್ಲ. ಆದರೆ, ಉಳಿದ ಆರೋಪಗಳ ಅಡಿಯಲ್ಲಿರುವ ಅಪರಾಧ ಕೃತ್ಯಗಳು ಎರಡೂ ದೇಶಗಳಲ್ಲಿ ಅಪರಾಧವೇ ಆಗಿರುವುದರಿಂದ ಹಸ್ತಾಂತರಕ್ಕೆ ಅರ್ಹ ಎಂದು ಅವರು ಯಶಸ್ವಿಯಾಗಿ ವಾದಿಸಿದ್ದರು. ಅಮೆರಿಕದ ನ್ಯಾಯಾಲಯಗಳು ಈ ವಾದವನ್ನು ಒಪ್ಪಿಕೊಂಡು ಕೊನೆಗೆ ರಾಣಾ ಹಸ್ತಾಂತರಕ್ಕೆ ಹಸಿರು ನಿಶಾನೆ ನೀಡಿದ್ದವು.
ಅಮೆರಿಕದಿಂದ ಹಸ್ತಾಂತರದ ಅಧಿಕೃತ ಮನವಿ ಬಂದರೆ ಏನಾಗುತ್ತದೆ?
ಸಾಮಾನ್ಯವಾಗಿ, ಹಸ್ತಾಂತರದ ಮನವಿಯನ್ನು ಅಮೆರಿಕದ ನ್ಯಾಯಾಂಗ ಇಲಾಖೆಯು ಸಿದ್ಧಪಡಿಸುತ್ತದೆ. ಆಮೇಲೆ ಅಲ್ಲಿನ ವಿದೇಶಾಂಗ ಇಲಾಖೆಯು ಇದನ್ನು ಭಾರತದ ವಿದೇಶಾಂಗ ಸಚಿವಾಲಯಕ್ಕೆ ರವಾನಿಸುತ್ತದೆ. ಭಾರತದ ವಿದೇಶಾಂಗ ಸಚಿವಾಲಯವು, ಗೃಹ ಸಚಿವಾಲಯ ಮತ್ತು ಸಿಬಿಐನಂತಹ ತನಿಖಾ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿ, ಈ ಮನವಿಯು ಹಸ್ತಾಂತರ ಒಪ್ಪಂದ ಹಾಗೂ ಭಾರತದ ಹಸ್ತಾಂತರ ಕಾಯ್ದೆಗೆ ಅನುಗುಣವಾಗಿದೆಯೇ ಎಂದು ಪರಿಶೀಲಿಸುತ್ತದೆ.
ಒಂದು ವೇಳೆ ಈ ಮನವಿಯನ್ನು ಪರಿಗಣಿಸಬಹುದು ಎಂದು ಕೇಂದ್ರ ಸರ್ಕಾರಕ್ಕೆ ಅನಿಸಿದರೆ, ಅದನ್ನು ಭಾರತದ ನ್ಯಾಯಾಲಯದ ಮುಂದೆ ಇಡಲಾಗುತ್ತದೆ. ನ್ಯಾಯಾಲಯವು ಒಪ್ಪಂದದ ನಿಯಮಗಳು ಪಾಲನೆಯಾಗಿವೆಯೇ ಮತ್ತು ಅಮೆರಿಕ ಒದಗಿಸಿರುವ ಸಾಕ್ಷ್ಯಗಳು ಭಾರತದಲ್ಲಿ ಈ ಅಪರಾಧ ನಡೆದಿದ್ದರೆ ವಿಚಾರಣೆ ನಡೆಸಲು ಸಾಕಾಗುತ್ತಿತ್ತೇ ಎಂದು ಪರಿಶೀಲಿಸುತ್ತದೆ.
ನ್ಯಾಯಾಲಯಕ್ಕೆ ತೃಪ್ತಿಯಾದರೆ, ಅದು ಆರೋಪಿಯನ್ನು ಹಸ್ತಾಂತರಕ್ಕೆ ಅರ್ಹ ಎಂದು ಪ್ರಮಾಣೀಕರಿಸಿ ತನ್ನ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸುತ್ತದೆ. ಹೀಗಿದ್ದರೂ, ಆರೋಪಿಯನ್ನು ಹಸ್ತಾಂತರಿಸುವ ಅಂತಿಮ ನಿರ್ಧಾರ ಕೇಂದ್ರ ಸರ್ಕಾರದ ಕೈಯಲ್ಲೇ ಇರುತ್ತದೆ. ಹಸ್ತಾಂತರಕ್ಕೆ ಅನುಮೋದನೆ ನೀಡುವ ಮುನ್ನ ಸರ್ಕಾರವು ಕೆಲವು ಷರತ್ತುಗಳನ್ನು ವಿಧಿಸಬಹುದು ಅಥವಾ ರಾಜತಾಂತ್ರಿಕ ಭರವಸೆಗಳನ್ನು ಕೇಳಬಹುದು. ಕೇಂದ್ರ ಸರ್ಕಾರದ ಯಾವುದೇ ಆದೇಶವನ್ನು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ಅವಕಾಶ ಇರುವುದರಿಂದ ಹಸ್ತಾಂತರ ಪ್ರಕ್ರಿಯೆಯು ಸ್ವಾಭಾವಿಕವಾಗಿ ಸುದೀರ್ಘ ಸಮಯ ತೆಗೆದುಕೊಳ್ಳುತ್ತದೆ.
ತಹವ್ವುರ್ ರಾಣಾ ಪ್ರಕರಣವೇ ಇದಕ್ಕೆ ಸೂಕ್ತ ಉದಾಹರಣೆ. ಭಾರತವು 2019ರಲ್ಲಿ ಸಲ್ಲಿಸಿದ ಹಸ್ತಾಂತರದ ಮನವಿಯು ಅಮೆರಿಕದ ಮ್ಯಾಜಿಸ್ಟ್ರೇಟ್ ನ್ಯಾಯಾಲಯ, ಜಿಲ್ಲಾ ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಪ್ರಕ್ರಿಯೆ, ನೈನ್ತ್ ಸರ್ಕ್ಯೂಟ್ ಕೋರ್ಟ್‌ನಲ್ಲಿ ಮೇಲ್ಮನವಿ ಮತ್ತು ಅಮೆರಿಕದ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ನಂತರವಷ್ಟೇ ಹಸ್ತಾಂತರಕ್ಕೆ ಅಂತಿಮ ಅನುಮೋದನೆ ಸಿಕ್ಕಿತು. ಭಯೋತ್ಪಾದನೆಗೆ ಸಂಬಂಧಿಸಿದ ಈ ತುರ್ತು ಪ್ರಕರಣವೂ ಮುಕ್ತಾಯಗೊಳ್ಳಲು ವರ್ಷಗಳೇ ಬೇಕಾಯಿತು.
ಭಾರತವು ಹಸ್ತಾಂತರವನ್ನು ನಿರಾಕರಿಸಬಹುದೇ ಅಥವಾ ವಿಳಂಬಗೊಳಿಸಬಹುದೇ?
ಒಪ್ಪಂದದ ಎಲ್ಲಾ ಷರತ್ತುಗಳು ಈಡೇರಿದರೂ, ಹಸ್ತಾಂತರ ಪ್ರಕ್ರಿಯೆಯು ಸ್ವಯಂಚಾಲಿತವಾಗಿ ಪೂರ್ಣಗೊಳ್ಳುವುದಿಲ್ಲ. ಒಪ್ಪಂದದ ಷರತ್ತುಗಳು ಅನ್ವಯವಾಗುವುದರಿಂದ ಪ್ರಕ್ರಿಯೆಗೆ ಚಾಲನೆ ಸಿಗಬಹುದು; ಆದರೆ ಆರೋಪಿಯನ್ನು ತಕ್ಷಣವೇ ಹಸ್ತಾಂತರಿಸಬೇಕು ಎಂದು ಅದು ಭಾರತವನ್ನು ಒತ್ತಾಯಿಸುವುದಿಲ್ಲ.
ವಿಶೇಷವಾಗಿ ಲಾರೆನ್ಸ್ ಬಿಷ್ಣೋಯ್ ವಿಷಯಕ್ಕೆ ಬಂದರೆ, ಇಲ್ಲಿನ ಪ್ರಮುಖ ಕಾನೂನು ಅಂಶವೆಂದರೆ ಅವನು ಈಗಾಗಲೇ ಭಾರತದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾನೆ ಮತ್ತು ದೇಶದಾದ್ಯಂತ ಅವನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಯುತ್ತಿದೆ.
ಒಪ್ಪಂದದ 14ನೇ ವಿಧಿಯು, ಆರೋಪಿಯನ್ನು ಮರಳಿ ಕಳುಹಿಸುವ ಷರತ್ತಿನ ಮೇಲೆ ವಿಚಾರಣೆಗಾಗಿ ತಾತ್ಕಾಲಿಕವಾಗಿ ಹಸ್ತಾಂತರಿಸಲು ಅವಕಾಶ ನೀಡುತ್ತದೆ. ಆದರೆ, ಭಾರತದ ಹಸ್ತಾಂತರ ಕಾಯ್ದೆಯ ಸೆಕ್ಷನ್ 31ರ ಪ್ರಕಾರ, ದೇಶದಲ್ಲಿ ಪ್ರಕರಣಗಳ ವಿಚಾರಣೆ ಬಾಕಿ ಇರುವಾಗ ಹಸ್ತಾಂತರವನ್ನು ಮುಂದೂಡಲು ಭಾರತಕ್ಕೆ ಕಾನೂನಾತ್ಮಕ ಹಕ್ಕಿದೆ. ಇದು ಹಸ್ತಾಂತರದ ಸಮಯವನ್ನು ನಿರ್ಧರಿಸುವಲ್ಲಿ ಭಾರತಕ್ಕೆ ಹೆಚ್ಚಿನ ವಿವೇಚನಾ ಅಧಿಕಾರವನ್ನು ನೀಡುತ್ತದೆ.
ಇದರರ್ಥ, ಬಿಷ್ಣೋಯ್ ವಿರುದ್ಧ ಭಾರತದಲ್ಲಿ ಬಾಕಿ ಇರುವ ಕೊಲೆ, ಸುಲಿಗೆ ಮತ್ತು ಸಂಘಟಿತ ಅಪರಾಧಗಳ ಹಲವಾರು ಪ್ರಕರಣಗಳ ವಿಚಾರಣೆಯನ್ನು ಅವನು ಮೊದಲು ಎದುರಿಸಬೇಕು. ಒಂದು ವೇಳೆ ದೋಷಿ ಎಂದು ಸಾಬೀತಾದರೆ ಆ ಶಿಕ್ಷೆಯನ್ನು ಅನುಭವಿಸಬೇಕು. ಆ ನಂತರವಷ್ಟೇ ಹಸ್ತಾಂತರದ ಬಗ್ಗೆ ಯೋಚಿಸಬಹುದು ಎಂದು ಭಾರತವು ಕಾನೂನುಬದ್ಧವಾಗಿ ವಾದಿಸಬಹುದು.
ಗುರಿಂದರ್ಜಿತ್ ಸಿಂಗ್ ನಾಗ್ರಾ ಮತ್ತು ವಿಕಾಶ್ ಯಾದವ್ ಪ್ರಕರಣದ ಹೋಲಿಕೆ
ಭಾರತದಲ್ಲಿ ನಾಗ್ರಾ ವಿರುದ್ಧ ಅಂತಹ ದೊಡ್ಡ ಮಟ್ಟದ ಪ್ರಕರಣಗಳ ವಿಚಾರಣೆ ನಡೆಯದೇ ಇರುವುದರಿಂದ ಅವನ ಪರಿಸ್ಥಿತಿ ಬಿಷ್ಣೋಯ್‌ಗಿಂತ ಭಿನ್ನವಾಗಿದೆ. ಆದರೂ, ಅಮೆರಿಕದ ದೋಷಾರೋಪ ಪಟ್ಟಿಯಲ್ಲಿರುವ ಅಪರಾಧ ಕೃತ್ಯಗಳು ಭಾರತೀಯ ಕಾನೂನಿನ ಅಡಿಯಲ್ಲೂ ಅಪರಾಧವಾಗಿದ್ದರೆ, ಭಾರತದ ಅಧಿಕಾರಿಗಳು ಇಲ್ಲಿಯೇ ಅವನ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು. ಹಸ್ತಾಂತರ ಕಾಯ್ದೆಯ ಸೆಕ್ಷನ್ 34ರ ಪ್ರಕಾರ, ವಿದೇಶದಲ್ಲಿ ನಡೆದ ಹಸ್ತಾಂತರದ ವ್ಯಾಪ್ತಿಗೆ ಬರುವ ಅಪರಾಧವನ್ನು ಭಾರತದಲ್ಲೇ ನಡೆದ ಅಪರಾಧ ಎಂದು ಪರಿಗಣಿಸಬಹುದಾಗಿದೆ. ಹಾಗೆಯೇ, ಆರೋಪಿಯನ್ನು ಹಸ್ತಾಂತರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ನಿರ್ಧರಿಸಿದರೆ, ಸೆಕ್ಷನ್ 34ಂ ಅಡಿಯಲ್ಲಿ ಅವನ ವಿರುದ್ಧ ಭಾರತದಲ್ಲೇ ಮೊಕದ್ದಮೆ ಹೂಡಲು ಕೇಂದ್ರಕ್ಕೆ ಅಧಿಕಾರವಿದೆ.
ಮಾಜಿ ರಾ ಅಧಿಕಾರಿ ವಿಕಾಶ್ ಯಾದವ್ ಪ್ರಕರಣವು ಇದಕ್ಕೆ ಒಂದು ಸುಳಿವು ನೀಡಬಹುದು. ಖಲಿಸ್ತಾನಿ ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನೂನ್ ಹತ್ಯೆ ಸಂಚಿನ ಆರೋಪದ ಮೇಲೆ ಅಮೆರಿಕದ ಪ್ರಾಸಿಕ್ಯೂಟರ್‌ಗಳು ವಿಕಾಶ್ ಯಾದವ್ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದ ನಂತರ, ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿ ಅವರನ್ನು ಬಂಧಿಸಿದ್ದರು. ಒಂದು ವೇಳೆ ವಾಷಿಂಗ್ಟನ್ ಅವರ ಹಸ್ತಾಂತರವನ್ನು ಕೋರಿದರೆ, ವಿದೇಶಕ್ಕೆ ಹಸ್ತಾಂತರಿಸುವ ಮುನ್ನ ದೇಶೀಯ ಕಾನೂನು ಪ್ರಕ್ರಿಯೆಗೆ ಆದ್ಯತೆ ನೀಡಬೇಕೇ ಅಥವಾ ಬೇಡವೇ ಎಂಬುದನ್ನು ಭಾರತ ನಿರ್ಧರಿಸಬೇಕಾಗುತ್ತದೆ. ಇದೇ ಪ್ರಶ್ನೆ ನಾಗ್ರಾ ಪ್ರಕರಣದಲ್ಲೂ ಎದುರಾಗಬಹುದು.
ಭಾರತ ಮತ್ತು ಅರಿಕ ನಡುವೆ ಹಸ್ತಾಂತರ ಪ್ರಕ್ರಿಯೆಗಳು ಎಷ್ಟು ಸಾಮಾನ್ಯ?
ಎರಡೂ ದೇಶಗಳ ನಡುವೆ ನಿಕಟ ಕಾರ್ಯತಂತ್ರದ ಸಂಬಂಧಗಳಿದ್ದರೂ, ಭಾರತ ಮತ್ತು ಅಮೆರಿಕ ನಡುವಿನ ಹಸ್ತಾಂತರ ಪ್ರಕ್ರಿಯೆಗಳು ಎಂದಿಗೂ ಅಷ್ಟೊಂದು ವೇಗವಾಗಿ ಅಥವಾ ಹೆಚ್ಚಾಗಿ ನಡೆದಿಲ್ಲ.
ಒಪ್ಪಂದ ಜಾರಿಗೆ ಬಂದಾಗಿನಿಂದ ಭಾರತವು ಸುಮಾರು 15 ಮಂದಿಯನ್ನು ಮಾತ್ರ ಅಮೆರಿಕಕ್ಕೆ ಹಸ್ತಾಂತರಿಸಿದೆ. 2002ರಲ್ಲಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಎಫ್‌ಬಿಐ ವಾಂಟೆಡ್ ವ್ಯಕ್ತಿ ಯೋಗೇಶ್ ರತಿಲಾಲ್ ಶಾ ಮೊದಲ ಬಾರಿಗೆ ಹಸ್ತಾಂತರಗೊಂಡಿದ್ದರು. ಇತ್ತೀಚೆಗೆ, 2005ರ ಭೀಕರ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ 2025ರಲ್ಲಿ ಗಣೇಶ್ ಶೆಣೈ ಎಂಬಾತನನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿತ್ತು. ವಿಶೇಷವೆಂದರೆ, 2017ರ ನಂತರ ಭಾರತದಿಂದ ನಡೆದ ಮೊದಲ ಹಸ್ತಾಂತರ ಇದಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಆ ಸಮಯದಲ್ಲಿ ಹೇಳಿದ್ದರು.
ಭಾರತದ ವಿದೇಶಾಂಗ ಸಚಿವಾಲಯದ ಅಂಕಿ-ಅಂಶಗಳ ಪ್ರಕಾರ, 2002ರಿಂದ 2018ರ ನಡುವೆ ಅಮೆರಿಕವು ಕೇವಲ 11 ಜನರನ್ನು ಮಾತ್ರ ಭಾರತಕ್ಕೆ ಹಸ್ತಾಂತರಿಸಿದೆ. ಆದರೆ ಭಾರತ ಸಲ್ಲಿಸಿದ್ದ ಸುಮಾರು 60ಕ್ಕೂ ಹೆಚ್ಚು ಹಸ್ತಾಂತರ ಮನವಿಗಳು ಅಮೆರಿಕದ ಅಧಿಕಾರಿಗಳ ಬಳಿ ಇನ್ನೂ ಬಾಕಿ ಉಳಿದಿವೆ.
ಕಳೆದ ಕೆಲವು ಪ್ರಕರಣಗಳನ್ನು ಗಮನಿಸಿದರೆ, ದೇಶಗಳ ನಡುವಿನ ನಿಕಟ ರಾಜತಾಂತ್ರಿಕ ಸಂಬಂಧಗಳು ಹಸ್ತಾಂತರಕ್ಕೆ ಗ್ಯಾರಂಟಿ ನೀಡುವುದಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಮುಂಬೈ ದಾಳಿಯ ಸಂಚುಕೋರ ಡೇವಿಡ್ ಕೋಲ್ಮನ್ ಹೆಡ್ಲಿಯೊಂದಿಗಿನ ಒಪ್ಪಂದದ ಷರತ್ತುಗಳು ಹಸ್ತಾಂತರಕ್ಕೆ ಅಡ್ಡಿಯಾಗಿದ್ದರಿಂದ ಅಮೆರಿಕ ಅವನನ್ನು ಭಾರತಕ್ಕೆ ನೀಡಲು ನಿರಾಕರಿಸಿತ್ತು. ಅದಕ್ಕೂ ಮುನ್ನ, ಭೋಪಾಲ್ ಗ್ಯಾಸ್ ದುರಂತದ ಆರೋಪಿ, ಯೂನಿಯನ್ ಕಾರ್ಬೈಡ್ ಮುಖ್ಯಸ್ಥ ವಾರೆನ್ ಆಂಡರ್ಸನ್ ಹಸ್ತಾಂತರಕ್ಕೆ ಭಾರತ ಸಲ್ಲಿಸಿದ್ದ ಮನವಿಯನ್ನು, ಸಾಕ್ಷ್ಯಾಧಾರಗಳ ಕೊರತೆಯನ್ನು ಉಲ್ಲೇಖಿಸಿ ಅಮೆರಿಕ ತಿರಸ್ಕರಿಸಿತ್ತು.

