ನವದೆಹಲಿ: ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಸಂಬಂಧ ಭಾರತ ಕುಸ್ತಿ ಒಕ್ಕೂಟದ(ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧದ ಆದೇಶವನ್ನು ದೆಹಲಿ ಕೋರ್ಟ್ ಕಾಯ್ದಿರಿಸಿದೆ.
ಆರು ಮಹಿಳಾ ಕುಸ್ತಿಪಟುಗಳು ದಾಖಲಿಸಿದ್ದ ಪ್ರಕರಣದ ಅಂತಿಮ ವಾದಗಳನ್ನು ಆಲಿಸಿದ ಹೆಚ್ಚುವರಿ ಮುಖ್ಯ ನ್ಯಾಯಾಲಯದ ನ್ಯಾಯಾಧೀಶ ಅಶ್ವಿನಿ ಪನ್ವಾರ್ ಅವರು ಆಗಸ್ಟ್ 3ಕ್ಕೆ ಆದೇಶವನ್ನು ಕಾಯ್ದಿರಿಸಿದ್ದಾರೆ
ಸಿಂಗ್ ವಿರುದ್ಧ ಕ್ರಿಮಿನಲ್ ಬೆದರಿಕೆ ಆರೋಪಗಳನ್ನು ಪಟ್ಟಿ ಮಾಡಲು 2024ರ ಮೇ ತಿಂಗಳಿನಲ್ಲಿ ನ್ಯಾಯಾಲಯ ಆದೇಶಿಸಿತ್ತು. ಆದರೂ 6 ಕುಸ್ತಿಪಟುಗಳ ಪೈಕಿ ಒಬ್ಬರ ಆರೋಪದಿಂದ ಸಿಂಗ್ ಅವರನ್ನು ದೋಷಮುಕ್ತಗೊಳಿಸಿತ್ತು.
ಅಲ್ಲದೇ, ಸಹ ಆರೋಪಿ ಮತ್ತು ಡಬ್ಲ್ಯುಪಿಐನ ಮಾಜಿ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ವಿರುದ್ಧವೂ ದೋಷಾರೋಪ ನಿಗದಿ ಮಾಡುವಂತೆಯೂ ಸೂಚಿಸಿತ್ತು.
ಆರು ಬಾರಿಯ ಸಂಸದ ಸಿಂಗ್ ವಿರುದ್ಧದ ಪ್ರಕರಣದಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 354 (ಮಹಿಳೆ ಮೇಲೆ ಮಾನಭಂಗ ಎಸಗುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲ ಪ್ರಯೋಗ), 354ಎ (ಲೈಂಗಿಕ ಕಿರುಕುಳ), 354ಡಿ(ಹಿಂಬಾಲಿಸುವಿಕೆ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ದೆಹಲಿ ಪೊಲೀಸರು ಜೂನ್ 15 ರಂದು ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

