ಪಹಲ್ಗಾಮ್: ದಕ್ಷಿಣ ಕಾಶ್ಮೀರ ಹಿಮಾಲಯದಲ್ಲಿರುವ ಅಮರನಾಥ ದೇವಾಲಯಕ್ಕೆ ತೆರಳುವ 57 ದಿನಗಳ ವಾರ್ಷಿಕ ಯಾತ್ರೆಗೆ ಶುಕ್ರವಾರ ಮುಂಜಾನೆ ಅಧಿಕೃತ ಚಾಲನೆ ದೊರೆತಿದೆ.
ಭಕ್ತರ ಮೊದಲ ತಂಡಗಳು ಬಾಲ್ತಾಲ್ ಮತ್ತು ಪಹಲ್ಗಾಮ್ ಕ್ಯಾಂಪ್‌ಗಳಿಂದ ದೇವಾಲಯದತ್ತ ಪ್ರಯಾಣ ಬೆಳೆಸಿವೆ.
'ಬಮ್ ಬಮ್ ಭೋಲೆ' ಘೋಷಣೆಗಳೊಂದಿಗೆ ಇಡೀ ಪರಿಸರದಲ್ಲಿ ಭಕ್ತಿಭಾವದ ವಾತಾವರಣ ನಿರ್ಮಾಣವಾಗಿತ್ತು. ಗಂದರ್ಬಲ್ ಮತ್ತು ಅನಂತನಾಗ್ ಮಾರ್ಗಗಳ ಮೂಲಕ ಯಾತ್ರಿಕರು ಸುಲಭವಾಗಿ ಸಾಗಲು ಆಡಳಿತ ಮತ್ತು ಭದ್ರತಾ ಪಡೆಗಳು ಮುಂಜಾನೆಯೇ ಟ್ರ್ಯಾಕ್‌ಗಳನ್ನು ಮುಕ್ತಗೊಳಿಸಿದವು.
ಬಾಲ್ತಾಲ್ ಬೇಸ್ ಕ್ಯಾಂಪ್‌ನಲ್ಲಿ ಲಘು ಮಳೆಯಿಂದಾಗಿ ತಾಪಮಾನ ಕುಸಿದಿದ್ದರೂ, ಭಕ್ತರ ಸಂಚಾರಕ್ಕೆ ಯಾವುದೇ ಅಡ್ಡಿಯಾಗದಂತೆ ಅಧಿಕಾರಿಗಳು ರಸ್ತೆಯನ್ನು ಸುಗಮಗೊಳಿಸಿದ್ದಾರೆ.
ಬಾಲ್ತಾಲ್ ನೋಡಲ್ ಅಧಿಕಾರಿ ರಾಹುಲ್ ಯಾದವ್ ಮಾತನಾಡಿ, 'ಬಾಲ್ತಾಲ್‌ನಿಂದ ಸುಗಮ ಯಾತ್ರೆಗಾಗಿ ಜಿಲ್ಲಾಡಳಿತ ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ. ಇಂದು ಸುಮಾರು 10,000 ಭಕ್ತರು ಪ್ರಯಾಣ ಬೆಳೆಸುವ ನಿರೀಕ್ಷೆಯಿದೆ. ಹವಾಮಾನ ವೈಪರೀತ್ಯ ಉಂಟಾದರೆ ಭಕ್ತರ ವಾಸ್ತವ್ಯಕ್ಕಾಗಿ ವಿವಿಧೆಡೆ ತುರ್ತು ಆಶ್ರಯ ತಾಣಗಳನ್ನು ನಿರ್ಮಿಸಲಾಗಿದೆ' ಎಂದು ತಿಳಿಸಿದ್ದಾರೆ.
ನುನ್ವಾನ್-ಪಹಲ್ಗಾಮ್ ಬೇಸ್ ಕ್ಯಾಂಪ್‌ನಲ್ಲಿ ಜಮ್ಮು ಮತ್ತು ಕಾಶ್ಮೀರ ಪೊಲೀಸ್, ಕೇಂದ್ರೀಯ ಮೀಸಲು ಪೊಲೀಸ್ ಪಡೆ ಮತ್ತು ಭಾರತೀಯ ಸೇನೆಯನ್ನೊಳಗೊಂಡ ಬಹುಪದರದ ಬಿಗಿ ಭದ್ರತೆಯ ನಡುವೆ ಭಕ್ತರ ಮೊದಲ ತಂಡಕ್ಕೆ ಹಸಿರು ನಿಶಾನೆ ತೋರಿಸಲಾಯಿತು.
ಅಮರನಾಥ ದೇವಾಲಯ ಮಂಡಳಿ ಮತ್ತು ಸ್ಥಳೀಯ ಆಡಳಿತ ಮಾಡಿರುವ ಅತ್ಯುತ್ತಮ ವ್ಯವಸ್ಥೆಗಳ ಬಗ್ಗೆ ಯಾತ್ರಿಕರು ಅಪಾರ ಸಂತೋಷ ಮತ್ತು ತೃಪ್ತಿ ವ್ಯಕ್ತಪಡಿಸಿದ್ದಾರೆ.
'ನಾನು ಮೊದಲ ಬಾರಿಗೆ ನನ್ನ ಕುಟುಂಬದೊಂದಿಗೆ ಬಂದಿದ್ದೇನೆ. ಇಲ್ಲಿನ ಪೊಲೀಸ್, ಸಿಆರ್‌ಪಿಎಫ್ ಮತ್ತು ಸೇನಾ ಸಿಬ್ಬಂದಿ ತುಂಬಾ ಸಹಕಾರ ನೀಡುತ್ತಿದ್ದಾರೆ. ಇಲ್ಲಿನ ಸಿದ್ಧತೆಗಳು ನಿಜಕ್ಕೂ ಅದ್ಭುತವಾಗಿವೆ' ಎಂದು ನುನ್ವಾನ್ ಕ್ಯಾಂಪ್‌ನ ಭಕ್ತರೊಬ್ಬರು ಹೇಳಿದ್ದಾರೆ.
ಮತ್ತೊಬ್ಬ ಭಕ್ತರು ಮಾತನಾಡಿ, ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಆರೋಗ್ಯ ಇಲಾಖೆ, ಸ್ಥಳೀಯರು ಮತ್ತು ಭದ್ರತಾ ಪಡೆಗಳು ಒದಗಿಸುತ್ತಿರುವ ಸೌಲಭ್ಯಗಳು ಹೆಚ್ಚು ಸುಧಾರಿಸಿವೆ ಎಂದು ಶ್ಲಾಘಿಸಿದರು.
ಭಕ್ತರ ಸುರಕ್ಷತೆ ಮತ್ತು ಜನಸಂದಣಿ ನಿರ್ವಹಣೆಗಾಗಿ ಈ ಬಾರಿ ಡಿಜಿಟಲ್ ಕಣ್ಗಾವಲು ಮತ್ತು ಆರ್‌ಎಫ್‌ಐಡಿ ಟ್ರ್ಯಾಕಿಂಗ್ ವ್ಯವಸ್ಥೆಯನ್ನು ಕಡ್ಡಾಯವಾಗಿ ಬಳಸಲಾಗುತ್ತಿದೆ.
ಇಂದು ಅಧಿಕೃತವಾಗಿ ಆರಂಭವಾಗಿರುವ 57 ದಿನಗಳ ವಾರ್ಷಿಕ ಯಾತ್ರೆಯು ಆಗಸ್ಟ್ 28ರಂದು ರಕ್ಷಾಬಂಧನ ಹಬ್ಬದ ದಿನದಂದು ಮುಕ್ತಾಯಗೊಳ್ಳಲಿದೆ.

