ನವದೆಹಲಿ: ಮಾಸಿಕ ವೇತನ ₹15 ಸಾವಿರಕ್ಕಿಂತ ಹೆಚ್ಚಿದ್ದರೆ, ಆ ಮೊತ್ತಕ್ಕಿಂತ ಹೆಚ್ಚಿನ ವೇತನಕ್ಕೆ ಸಂಬಂಧಿಸಿದ ಇಪಿಎಫ್ ಕೊಡುಗೆಯನ್ನು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಐಚ್ಛಿಕವಾಗಿಸಿದೆ. ₹15 ಸಾವಿರ ಮೂಲ ವೇತನಕ್ಕೆ ಪಿ. ಎಫ್ ಕೊಡುಗೆ ₹1,800 ಆಗುತ್ತದೆ.
ಇದಕ್ಕೂ ಮೊದಲು ಜಾರಿಯಲ್ಲಿ ಇದ್ದ 'ನೌಕರರ ಪಿಂಚಣಿ ನಿಧಿ ಯೋಜನೆ 1952'ರ ನಿಯಮಗಳ ಪ್ರಕಾರ ವೇತನ ಮಿತಿಯು (ಈಗ ಅದು ಮಾಸಿಕ ₹15 ಸಾವಿರ) ನೌಕರರನ್ನು ಇಪಿಎಫ್‌ಒ ವ್ಯಾಪ್ತಿಗೆ ಸೇರಿಸುವುದಕ್ಕೆ ಮಾನದಂಡವಾಗಿ ಬಳಕೆಯಾಗುತ್ತಿತ್ತು.
₹15 ಸಾವಿರದವರೆಗೆ ಮೂಲವೇತನ ಹೊಂದಿರುವ ಎಲ್ಲ ನೌಕರರನ್ನು ಕಡ್ಡಾಯವಾಗಿ ಇಪಿಎಫ್‌ಒ ವ್ಯಾಪ್ತಿಗೆ ತರಲಾಗುತ್ತಿತ್ತು. ಅದಕ್ಕಿಂತ ಹೆಚ್ಚಿನ ಮೂಲವೇತನ ಹೊಂದಿರುವವರಿಗೆ ಇಪಿಎಫ್‌ಒ ಸೇರುವುದು ಐಚ್ಛಿಕವಾಗಿತ್ತು.
ಇಪಿಎಫ್‌ಒ ವ್ಯಾಪ್ತಿಗೆ ಬಂದ ನಂತರದಲ್ಲಿ ನೌಕರರು ತಮ್ಮ ವಾಸ್ತವ ಮೂಲವೇತನದ ಆಧಾರದಲ್ಲಿ ಪಿ.ಎಫ್ ನಿಧಿಗೆ ಕೊಡುಗೆ ನೀಡುತ್ತಿದ್ದರು, ಉದ್ಯೋಗದಾತರು ಆ ಮೊತ್ತಕ್ಕೆ ಸಮನಾಗಿ ತಾವೂ ಕೊಡುಗೆ ನೀಡುತ್ತಿದ್ದರು. ಇದು ಕಾಲಕಾಲಕ್ಕೆ ಸರ್ಕಾರ ನಿಗದಿ ಮಾಡುತ್ತಿದ್ದ ವೇತನ ಮಿತಿಗಿಂತ ಹೆಚ್ಚಿನ ಪ್ರಮಾಣದಲ್ಲಿಯೂ ಇರುತ್ತಿತ್ತು. ಈಗಿರುವ ವೇತನ ಮಿತಿಯಾದ ₹15 ಸಾವಿರ 2014ರಲ್ಲಿ ನಿಗದಿ ಆಗಿದೆ.

