ಕಾಸರಗೋಡು: ಪಾಕಿಸ್ತಾನದ ಪೌರತ್ವ ಮರೆಮಾಚಿ ಭಾರತೀಯ ಪಾಸ್‍ಪೋಟ್ ಪಡೆದ ಕಣ್ಣೂರು ಕನ್ನಾಡಿಪರಂಬು ಕೊಟ್ಟಿಚ್ಚಾಲಿಲ್ ನಿವಾಸಿ ಎಂ.ಕೆ. ಅಲೀನಾ (24) ಎಂಬಾಕೆಯನ್ನು ಕಣ್ಣೂರು ಮೈಯಿಲ್ ಠಾಣೆ ಪೆÇಲೀಸರು ಬಂಧಿಸಿದ್ದಾರೆ. ಈಕೆ ವಿರುದ್ಧ ಪಾಸ್‍ಪೋರ್ಟ್ ಆಕ್ಟ್-22, ಇಂಟರ್ ನ್ಯಾಷನಲ್ ಪಾರಿನರ್ಸ್ ಆಕ್ಟ್-2025 ಒಳಗೊಂಡಂತೆ ವಿವಿಧ ಕಾಯ್ದೆಗಳನ್ವಯ ಕೇಸು ದಾಖಲಿಸಿಕೊಂಡಿದ್ದಾರೆ.
ಕನ್ನಾಡಿಪರಂಬು ನಿವಾಸಿ ಅಬ್ದುಲ್ ಕರೀಂ ಎಂಬವರು 1946ರಲ್ಲಿ ಭಾರತ ತೊರೆದು ಪಾಕಿಸ್ತಾನಕ್ಕೆ ತೆರಳಿ ಅಲ್ಲಿ ಕಾಯಂ ವಾಸ್ತವ್ಯ ಹೂಡಿದ್ದರು. ನಂತರ ಅಲ್ಲಿ ಹಸೀನಾ ಬೀಗಂ ಎಂಬ ಮಹಿಳೆಯನ್ನು ವಿವಾಹವಾಗಿ ಆ ದಂಪತಿಗೆ ಆರು ಮಕ್ಕಳು ಜನಿಸಿದರು. ಇದರಲ್ಲಿ ನಾಲ್ಕನೇ ಪುತ್ರಿ ಹಾಗೂ ಪಾಕಿಸ್ತಾನ ಪ್ರಜೆಯಾಗಿರುವ ಕೈರುನ್ನೀಸಾ 2006 ಮೇ 13ರಂದು ತಮ್ಮ ಮಕ್ಕಳ ಜತೆ ಭಾರತಕ್ಕೆ ಬಂದಿದ್ದಳು. ಈ ಮಕ್ಕಳಲ್ಲಿ ಪಾಕಿಸ್ತಾನ ಪೌರತ್ವ ಹೊಂದಿರುವ ಅಲೀನಾ ಒಬ್ಬಳಾಗಿದ್ದಾಳೆ. ಪಾಕಿಸ್ತಾನ ಪೌರತ್ವ ಮರೆಮಾಚಿ ಈಕೆ ನಕಲಿ ದಾಖಲೆಪತ್ರ ತಯಾರಿಸಿ 2025 ಜುಲೈ 7ರಂದು ಭಾರತೀಯ ಪಾಸ್‍ಪೋರ್ಟ್‍ಗಾಗಿ ಅರ್ಜಿ ಸಲ್ಲಿಸಿದ್ದಳು. ಈಕೆ ಸಲ್ಲಿಸಿದ್ದ ದಾಖಲೆ ಪತ್ರಗಳು ಕೇಂದ್ರ ಗೃಹ ಸಚಿವಾಲಯ ಪರಿಶೀಲಿಸುತ್ತಿರುವ ಮಧ್ಯೆ 2026 ಮಾರ್ಚ್ 3ರಂದು ಅಲೀನಾ ಭಾರತೀಯ ಪಾಸ್‍ಪೋರ್ಟ್ ಪಡೆದುಕೊಂಡಿದ್ದಳು. ಇದೇ ಪಾಸ್‍ಪೋರ್ಟ್ ಮೂಲಕ ದುಬೈಯಲ್ಲಿ ದುಡಿಯುತ್ತಿದ್ದ ಪತಿ ಬಳಿ ತೆರಳಿದ್ದಳು. ಗುಪ್ತಚರ ಪೊಲೀಸರು ನಡೆಸಿದ ತಪಾಸಣೆಯಿಂದ ಈಕೆ ನಕಲಿ ದಾಖಲೆ ಸಲ್ಲಿಸಿ ಪಾಸ್‍ಪೋರ್ಟ್ ಗಿಟ್ಟಿಸಿಕೊಂಡಿರುವ ಮಾಹಿತಿ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಈಕೆ ವಿರುದ್ಧ ಕೇಸು ದಾಖಲಿಸಿಕೊಂಡಿದ್ದರು. ಸೋಮವಾರ ಈಕೆ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಪೆÇಲೀಸರು ಆಕೆಯನ್ನು ಬಂಧಿಸಿದ್ದಾರೆ. ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಿದ್ದಾರೆ.



