ನವದೆಹಲಿ: ಚುನಾವಣಾ ಆಯೋಗವು 'ಫಾರ್ಮ್ 6'ರ ಆನ್‌ಲೈನ್ ಆವೃತ್ತಿಗೆ ಹೊಸ ವಿಭಾಗವೊಂದನ್ನು ಸೇರಿಸಿದ್ದು, ಇದರಲ್ಲಿ ಅರ್ಜಿದಾರರು ಅಥವಾ ಅವರ ಪೋಷಕರು ಕಳೆದ ಬಾರಿಯ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯ (ಎಸ್‌ಐಆರ್) ಭಾಗವಾಗಿದ್ದರೇ ಎಂದು ಕೇಳಲಾಗಿದೆ ಎಂದು ಸುದ್ದಿಸಂಸ್ಥೆಯು ರವಿವಾರ ವರದಿ ಮಾಡಿದೆ.
ಈ ಹೊಸ ಘೋಷಣೆಯು ಇಅIಓಇಖಿ ಪೋರ್ಟಲ್‌ನಲ್ಲಿ ಲಭ್ಯವಿರುವ ಆನ್‌ಲೈನ್ ಫಾರ್ಮ್ 6ರಲ್ಲಿ ಮಾತ್ರಇದೆ. ಡೌನ್‌ಲೋಡ್ ಮಾಡಬಹುದಾದ ಶಾಸನಬದ್ಧ ಫಾರ್ಮ್‌ನ ಆವೃತ್ತಿಯಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.
18 ವರ್ಷ ತುಂಬಿದ ನಂತರ ಅಥವಾ ಭಾರತೀಯ ಪೌರತ್ವ ಪಡೆದ ನಂತರ ಅಥವಾ ಮತದಾರರ ಪಟ್ಟಿಯಿಂದ ತಮ್ಮ ಹೆಸರು ಕೈಬಿಟ್ಟು ಹೋಗಿದ್ದರೆ ಅಂತಹ ವ್ಯಕ್ತಿಗಳು ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಫಾರ್ಮ್ 6ರ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಜೂನ್ 2025 ರಲ್ಲಿ ಚುನಾವಣಾ ಆಯೋಗವು ವಿಶೇಷ ತೀವ್ರ ಪರಿಷ್ಕರಣೆಯನ್ನು ಪ್ರಾರಂಭಿಸಿದಾಗಿನಿಂದ ಈ ಫಾರ್ಮ್ ಅನ್ನು ತಿದ್ದುಪಡಿ ಮಾಡಲಾಗಿಲ್ಲ. ಪ್ರಜಾಪ್ರತಿನಿಧಿ ಕಾಯ್ದೆ 1950ರ ಸೆಕ್ಷನ್ 28ರ ಪ್ರಕಾರ, ಫಾರ್ಮ್ 6 ಸೇರಿದಂತೆ ಚುನಾವಣಾ ಫಾರ್ಮ್‌ಗಳಿಗೆ ಸಂಬಂಧಿಸಿದ ನಿಯಮಗಳನ್ನು ತಿದ್ದುಪಡಿ ಮಾಡಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ.
ಈ ಹೊಸ ಘೋಷಣೆಯನ್ನು ಕಡ್ಡಾಯ ಎಂದು ಹೇಳಿರದಿದ್ದರೂ ಅರ್ಜಿದಾರರು ಅದನ್ನು ಭರ್ತಿ ಮಾಡದೆ ಆನ್‌ಲೈನ್ ಫಾರ್ಮ್ ಅನ್ನು ಸಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿಯು ತಿಳಿಸಿದೆ.
ಹೊಸದಾಗಿ ಸೇರಿಸಲಾದ ವಿಭಾಗವು ಅರ್ಜಿದಾರರಿಗೆ ಕೆಳಗಿನ ಮೂರು ಆಯ್ಕೆಗಳಲ್ಲಿ ಒಂದನ್ನು ಗುರುತು ಮಾಡಲು ಕೇಳುತ್ತದೆ:
ಕಳೆದ ಎಸ್‌ಐಆರ್‌ನ ಮತದಾರರ ಪಟ್ಟಿಯಲ್ಲಿ ನನ್ನ ಹೆಸರಿದೆ
ನನ್ನ ಪೋಷಕರ ಹೆಸರು (ತಂದೆ,ತಾಯಿ,ಅಜ್ಜ,ಅಜ್ಜಿ) ಕಳೆದ ಎಸ್‌ಐಆರ್ ನ ಮತದಾರರ ಪಟ್ಟಿಯಲ್ಲಿದೆ
ಕಳೆದ ಎಸ್‌ಐಆರ್ ನ ಮತದಾರರ ಪಟ್ಟಿಯಲ್ಲಿ ನನ್ನ ಹೆಸರಾಗಲಿ ನನ್ನ ಪೋಷಕರ ಹೆಸರಾಗಲಿ ಇಲ್ಲ
ಮೊದಲ ಎರಡು ಆಯ್ಕೆಗಳನ್ನು ಆರಿಸಿಕೊಳ್ಳುವವರು ಹಿಂದಿನ ಮತದಾರರ ಪಟ್ಟಿಯಿಂದ ತಮ್ಮ ವಿಧಾನಸಭಾ ಕ್ಷೇತ್ರ, ಬೂತ್ ಸಂಖ್ಯೆ ಮತ್ತು ಕ್ರಮ ಸಂಖ್ಯೆಯಂತಹ ವಿವರಗಳನ್ನು ಒದಗಿಸಬೇಕಾಗುತ್ತದೆ. ಒಂದು ವೇಳೆ ಅರ್ಜಿದಾರರ ಬಳಿ ಈ ವಿವರಗಳು ಇಲ್ಲದಿದ್ದರೆ ಅವರು ಏನು ಮಾಡಬೇಕು ಎನ್ನುವುದು ಸ್ಪಷ್ಟವಾಗಿಲ್ಲ.

