ನವದೆಹಲಿ: 'ರಾಮಮಂದಿರ ದೇಣಿಗೆ ದುರುಪಯೋಗ ಪ್ರಕರಣವನ್ನು ರಾಜಕೀಯಗೊಳಿಸಬೇಡಿ' ಎಂದು ಸುಪ್ರೀಂ ಕೋರ್ಟ್ ಸೋಮವಾರ ಸೂಚಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜಾಯ್‌ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು, ನ್ಯಾಯಾಲಯಗಳು ರಾಜಕೀಯ ಮಾಡುವ ಸ್ಥಳವಲ್ಲ ಎಂದಿದೆ.
'ದಯವಿಟ್ಟು ಈ ವಿಷಯವನ್ನು ರಾಜಕೀಯಗೊಳಿಸಬೇಡಿ. ನ್ಯಾಯಾಲಯಗಳು ರಾಜಕೀಯ ಮಾಡುವ ಸ್ಥಳವಲ್ಲ. ಇದು ಕೇವಲ ಒಂದು ಅಪರಾಧ ಕೃತ್ಯದ ಪ್ರಕರಣವಾಗಿದೆ. ನಾವು ಇಲ್ಲಿ ಇರುವುದು ಕೇವಲ ಸೂಕ್ತ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಮಾತ್ರ' ಎಂದು ಪೀಠ ತಿಳಿಸಿದೆ.
ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಹಿಂದಿನ ಆದೇಶದ ಅನುಸಾರ ರಾಜ್ಯ ಸರ್ಕಾರವು ಸ್ಥಿತಿಗತಿ ವರದಿಯನ್ನು ಸಲ್ಲಿಸಿದೆ ಎಂದು ಪೀಠದ ಗಮನಕ್ಕೆ ತಂದಿದ್ದಾರೆ.
'ತನಿಖೆ ನಡೆಯುತ್ತಿದೆ. ಎಂಟು ಜನರನ್ನು ಬಂಧಿಸಲಾಗಿದೆ. ನಾನು ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ' ಎಂದು ಮೆಹ್ತಾ ತಿಳಿಸಿದ್ದಾರೆ.
ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆಯೇ? ಎಂಬ ಪ್ರಶ್ನೆಗೆ, 'ಸತ್ಯಾಸತ್ಯತೆಯನ್ನು ಪತ್ತೆಹಚ್ಚಲು ಎಸ್‌ಐಟಿಯನ್ನು ರಚಿಸಲಾಗಿತ್ತು. ಈಗ ಪೊಲೀಸರು ಇದರ ತನಿಖೆ ನಡೆಸುತ್ತಿದ್ದಾರೆ. ಇದು ತನಿಖೆ ನಡೆಸಬಹುದಾದ ಅಪರಾಧ ಎಂಬುದನ್ನು ಮಾತ್ರ ಎಸ್‌ಐಟಿ ಪತ್ತೆಹಚ್ಚಿದೆ' ಎಂದು ಮೆಹ್ತಾ ತಿಳಿಸಿದ್ದಾರೆ. ಜುಲೈ 27ಕ್ಕೆ ವಿಚಾರಣೆ ಮುಂದೂಡಲಾಗಿದೆ.

