ಕೋಲ್ಕತ್ತ: 'ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಕೆಲವು ದಿನಗಳ ಹಿಂದೆ ಕೋಲ್ಕತ್ತದಲ್ಲಿ ಪ್ರತಿಭಟನೆ ನಡೆಸಲಾಗಿತ್ತು. ಆ ವೇಳೆ ವಿದೇಶಿ ಸಂಘಟನೆಗಳ ಬೆಂಬಲದೊಂದಿಗೆ ಇಸ್ಲಾಂ ಮೂಲಭೂತವಾದಿ ಹಿಂಸಾಚಾರ ನಡೆಸಿದ್ದಾರೆ' ಎಂದು ಪಶ್ಚಿಮ ಬಂಗಾಳದ ಮುಖ್ಯಂತ್ರಿ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.
'ಕಾರ್ಗಿಲ್ ವಿಜಯ್ ದಿವಸ್' ಕಾರ್ಯಕ್ರಮದಲ್ಲಿ ಮಾತನಾಡಿರುವ ಸುವೇಂದು, 'ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಇಸ್ಲಾಂ ಮೂಲಭೂತವಾದಿಗಳು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಪ್ರತಿಭಟನಾಕಾರನ್ನು ಚದುರಿಸಲು ಪೊಲೀಸರು ಅಶ್ರುವಾಯು ಹಾಗೂ ಲಾಠಿಚಾರ್ಜ್ ಮಾಡಬೇಕಾಯಿತು. ಈ ಪ್ರತಿಭಟನೆಯ ಹಿಂಸಾಚಾರಕ್ಕೆ ಕಾರಣ ಆದವರ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. 'ನೀಟ್'ಗೆ ಸಂಬಂಧವಿಲ್ಲದ 70ಕ್ಕೂ ಅಧಿಕ ಮಂದಿ ಈ ರ್‍ಯಾಲಿಯಲ್ಲಿ ವಿದ್ಯಾರ್ಥಿಗಳ ಜೊತೆಯಲ್ಲಿ ಭಾಗಿಯಾಗಿದ್ದರು' ಎಂದಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನೋಂದಣಿ ಆಗದಿರುವ ಮದರಸಾಗಳ ಮೇಲೆ ಕ್ರಮ, ಒಬಿಸಿ ಸರ್ಟಿಫಿಕೇಟ್ ಬಗ್ಗೆ ಕೋರ್ಟ್ ನೀಡಿದ ಆದೇಶ ಜಾರಿ, ಗೋ ಹತ್ಯೆ ತಡೆಯುವ ಕಾಯ್ದೆ , ಶಬ್ದ ಮಾಲಿನ್ಯ ತಡೆಯಲು ಕೈಗೊಂಡ ಕ್ರಮ ತೆಗೆದುಕೊಳ್ಳಲಾಗಿದೆ. ಈ ಕ್ರಮಗಳನ್ನು ವಿರೋಧಿಸಿ 'ನೀಟ್' ಪ್ರತಿಭಟನೆ ವೇಳೆ ಇಸ್ಲಾಂ ಮೂಲಭೂತವಾದಿ ಹಿಂಸಾಚಾರ ನಡೆಸಿರಬಹುದು ಎಂದು ಆರೋಪಿಸಿದ್ದಾರೆ.

