ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಮರು ಸ್ಥಾಪಿಸುವಂತೆ ಆಗ್ರಹಿಸಿ ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ಹೊಸದಿಲ್ಲಿಯ ಜಂತರ್ ಮಂತರ್‌ನಲ್ಲಿ ಜುಲೈ 20ರಂದು ಪ್ರತಿಭಟನೆ ನಡೆಸಲಿದೆ.
ಸಂಸತ್ತಿನ ಮುಂಗಾರು ಅಧಿವೇಶನದ ಆರಂಭದ ದಿನ ಹೊಸದಿಲ್ಲಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲು ಕಾಂಗ್ರೆಸ್ ಅಧ್ಯಕ್ಷರು, ಇತರ ರಾಜಕೀಯ ಪಕ್ಷಗಳ ಮುಖಂಡರು ಮತ್ತು ತಮಿಳುನಾಡಿನ ಮುಖ್ಯಮಂತ್ರಿ ಸೇರಿದಂತೆ ದೇಶಾದ್ಯಂತದ 56 ನಾಯಕರನ್ನು ನ್ಯಾಷನಲ್ ಕಾನ್ಫರೆನ್ಸ್ ಆಹ್ವಾನಿಸಿದೆ.
ಅಧಿಕಾರ ವಹಿಸಿಕೊಂಡ ಬಳಿಕ ಉಮರ್ ಅವರ ಸಚಿವ ಸಂಪುಟ ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನ ಮಾನವನ್ನು ಮರು ಸ್ಥಾಪಿಸುವಂತೆ ಕೋರಿ ನಿರ್ಣಯ ಅಂಗೀಕರಿಸಿತ್ತು. ನಿರ್ಣಯದ ಪ್ರತಿಗಳನ್ನು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಇತರ ಕೇಂದ್ರ ನಾಯಕರಿಗೆ ಸಲ್ಲಿಸಲಾಗಿತ್ತು. ಆದರೆ, ಈ ವಿಷಯದಲ್ಲಿ ಯಾವುದೇ ಪ್ರಗತಿಯಾಗಿಲ್ಲ ಎಂದು ಎನ್‌ಸಿ ತಿಳಿಸಿದೆ.
ಪ್ರತಿಭಟನೆಯಲ್ಲಿ ಭಾಗವಹಿಸುವುದಾಗಿ ಜಮ್ಮು ಮತ್ತು ಕಾಶ್ಮೀರ ಕಾಂಗ್ರೆಸ್ ಘೋಷಿಸಿದೆ. ಪಿಡಿಪಿ ಮತ್ತು ಕಾಶ್ಮೀರ ಮೂಲದ ಇತರ ವಿರೋಧ ಪಕ್ಷಗಳು ಇದರಲ್ಲಿ ಭಾಗವಹಿಸುವ ಸಾಧ್ಯತೆ ಇಲ್ಲ. ಎನ್‌ಸಿ ಸಂಸದ ಆಘಾ ರುಹಲ್ಲಾ ಅವರು ಕೂಡ ತಾವು ಪ್ರತಿಭಟನೆಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದ್ದಾರೆ. ವಿಧಿ 370ರ ಮರು ಸ್ಥಾಪನೆಗೆ ಪಕ್ಷಕ್ಕೆ ಜನಾದೇಶ ಸಿಕ್ಕಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆ.
ಅದೇ ದಿನ ಜಮ್ಮು ಮತ್ತು ಕಾಶ್ಮೀರ ಸರಕಾರದ ಹೊರಗುತ್ತಿಗೆ ನೀತಿಯ ವಿರುದ್ಧ ಸಚಿವಾಲಯಕ್ಕೆ ಮುತ್ತಿಗೆ ಹಾಕುವುದಾಗಿ ಬಿಜೆಪಿಯ ಜಮ್ಮು ಮತ್ತು ಕಾಶ್ಮೀರ ಘಟಕ ಘೋಷಿಸಿದೆ.
ಉಮರ್ ಅಬ್ದುಲ್ಲಾ ಸರಕಾರದ ಹೊರಗುತ್ತಿಗೆ ನೀತಿಯನ್ನು ವಿರೋಧಿಸಿ ಬಿಜೆಪಿ ಕಾರ್ಯಕರ್ತರು ಸಚಿವಾಲಯಕ್ಕೆ ಮುತ್ತಿಗೆ ಹಾಕಲಿದ್ದಾರೆ. ಹೊರಗುತ್ತಿಗೆ ನೀತಿಯ ಮೂಲಕ ಸುಮಾರು 25 ಸಾವಿರ ಯುವಕರಿಗೆ ಹಿಂಬಾಗಿಲಿನಿಂದ ಉದ್ಯೋಗ ನೀಡಲಾಗಿದೆ. ಇದು ನಿರುದ್ಯೋಗಿ ಯುವಕರಿಗೆ ಮಾಡುತ್ತಿರುವ ಅನ್ಯಾಯವಾಗಿದೆ ಎಂದು ಜಮ್ಮು ಮತ್ತು ಕಾಶ್ಮೀರ ಬಿಜೆಪಿ ವಕ್ತಾರ ಮಂಝೂರ್ ಭಟ್ ಹೇಳಿದ್ದಾರೆ.

