ಡೆಹ್ರಾಡೂನ್: ಪ್ರಶ್ನೆ ಪತ್ರಿಕೆಗಳು ಸೋರಿಕೆಯಾದ ಆರೋಪದ ಹಿನ್ನಲೆಯಲ್ಲಿ ಉತ್ತರಾಖಂಡ ತಾಂತ್ರಿಕ ವಿಶ್ವವಿದ್ಯಾನಿಲಯ ಎರಡು ಎಂಜಿನಿಯರಿಂಗ್ ಪರೀಕ್ಷೆಗಳನ್ನು ರದ್ದುಗೊಳಿಸಿದೆ.
ಈ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ವೀರ್ ಮಾಧೋ ಸಿಂಗ್ ಭಂಡಾರಿ ಉತ್ತರಾಖಂಡ ತಾಂತ್ರಿಕ ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿರುವ ಶಿವಾಲಿಕ್ ಎಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಆಶಿಶ್ ಕುಮಾರ್ ಗುಪ್ತಾ ಅವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.
ದೇಶಾದ್ಯಂತ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆಯೋಜಿಸುವಲ್ಲಿ ನಡೆದಿರುವ ಅಕ್ರಮಗಳ ವಿರುದ್ಥ ಪ್ರತಿಭಟನೆಗಳು ನಡೆಯುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ವಿಶ್ವವಿದ್ಯಾಲಯದ ಪರೀಕ್ಷಾ ನಿಯಂತ್ರಕರು ನೀಡಿದ ದೂರಿನ ಆಧಾರದ ಮೇಲೆ ಗುಪ್ತಾ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಜುಲೈ 7 ಮತ್ತು ಜುಲೈ 8ರಂದು ನಡೆಯಬೇಕಿದ್ದ 'ಮೆಷಿನ್ ಲರ್ನಿಗ್ ಫಾರ್ ಇಂಟರ್ನೆಟ್ ಆಫ್ ಥಿಂಗ್ಸ್' ಮತ್ತು 'ಎಲೆಕ್ಟ್ರೋಮ್ಯಾಗ್ನೆಟಿಕ್ ಫೀಲ್ಡ್ ಥಿಯರಿ' ಪರೀಕ್ಷೆಗಳಿಗೆ ಗುಪ್ತಾ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಿದ್ದರು.
ಕುಮಾರ್ ಅವರು ಪರೀಕ್ಷೆಗೆ ಮುನ್ನವೇ ಸಂಸ್ಥೆಯ ಪೋರ್ಟಲ್ ಮತ್ತು ವ್ಯಾಟ್ಸ್ಯಾಪ್ ಮೂಲಕ ಪ್ರಶ್ನೆಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದಾರೆ ಎಂಬುದು ಆಂತರಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ವಿಶ್ವವಿದ್ಯಾನಿಲಯ ಆರೋಪಿಸಿದೆ.
ಈ ಪ್ರಶ್ನೆ ಪತ್ರಿಕೋ ಸೋರಿಕೆ ವಿಶ್ವವಿದ್ಯಾನಿಲಯಕ್ಕೆ ಸಂಯೋಜಿತವಾಗಿರುವ 12 ಸಂಸ್ಥೆಗಳ ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. ಈ ಎರಡೂ ವಿಷಯಗಳ ಮರು ಪರೀಕ್ಷೆಯನ್ನು ಆಗಸ್ಟ್ ಮೂರನೇ ವಾರದಲ್ಲಿ ನಡೆಸಲಾಗುವುದು ಎಂದು ವಿಶ್ವವಿದ್ಯಾನಿಲಯ ಆದೇಶದಲ್ಲಿ ತಿಳಿಸಿದೆ.
ಇದರ ಜೊತೆಗೆ ಕುಮಾರ್ ಅವರನ್ನು ''ಮುಂದಿನ ಏಳು ವರ್ಷಗಳ ಕಾಲ ವಿಶ್ವವಿದ್ಯಾನಿಲಯದ ಎಲ್ಲಾ ಪರೀಕ್ಷೆಗೆ ಸಂಬಂಧಿಸಿದ ಕೆಲಸಗಳಿಂದ ಅಮಾನತು ಮಾಡಲಾಗಿದೆೆ'' ಎಂದು ಅದು ಹೇಳಿದೆ.
ಸೂಕ್ತ ಮೇಲ್ವಿಚಾರಣೆ ಮತ್ತು ಸಾಂಸ್ಥಿಕ ನಿಯಂತ್ರಣವನ್ನು ಕಾಯ್ದುಕೊಳ್ಳದಿರುವುದಕ್ಕಾಗಿ ವಿಶ್ವವಿದ್ಯಾನಿಲಯದ ಪರೀಕ್ಷಾ ನಿಯಂತ್ರಕರು ಶಿವಾಲಿಕ್ ಎಂಜಿನಿಯರಿಂಗ್ ಕಾಲೇಜಿಗೆ ಎಚ್ಚರಿಕೆ ನೀಡಿದ್ದಾರೆ.
ಅವರು ಗುಪ್ತಾ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ ಎಂದು ಕಾಲೇಜಿನ ನಿರ್ದೇಶಕ ಟಿ.ಎಸ್. ಸಿಧು ಪತ್ರಿಕೆಗೆ ತಿಳಿಸಿದ್ದಾರೆ.

