ಜಿಂದ್ (PTI): 'ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ಮುಂದುವರಿದಿದ್ದರೂ ಭಾರತವು ದೊಡ್ಡ ಪ್ರಮಾಣದಲ್ಲಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಹಾಗೂ ರಾಸಾಯನಿಕ ಗೊಬ್ಬರಗಳನ್ನು ಹೊರ್ಮುಜ್ ಜಲಸಂಧಿಯ ಮೂಲಕ ತರಿಸಿಕೊಂಡಿದೆ. ಯುದ್ಧ ಹಾಗೂ ಸಂಘರ್ಷದಲ್ಲಿಯೂ ಭಾರತೀಯ ರೈಲ್ವೆ ಹಾಗೂ ದೇಶದ ಅಭಿವೃದ್ಧಿಯೂ ವಾಹನವೂ ನಿಂತಿಲ್ಲ' ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಶುಕ್ರವಾರ ಜಲಜನಕ ಚಾಲಿತ ರೈಲಿಗೆ ಚಾಲನೆ ನೀಡಿದ ಬಳಿಕ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು.
'2014ಕ್ಕೂ ಮೊದಲು ಈ ಪರಿಸ್ಥಿತಿ ನಿರ್ಮಾಣವಾಗಿದ್ದರೆ, ಭಾರತೀಯ ರೈಲ್ವೆಯು ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತಿತ್ತು' ಎಂದು ಮೋದಿ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್,'ರೈಲ್ವೆ ಇಲಾಖೆಯ ಪಾಲಿಗೆ ಐತಿಹಾಸಿಕ ದಿನವಾಗಿದೆ. ಕೇಂದ್ರದ ದೃಢ ನಿರ್ಧಾರದಿಂದ ದೇಶವು ಐತಿಹಾಸಿಕ ತಾಂತ್ರಿಕ ಹೆಜ್ಜೆಗುರುತು ಮೂಡಿಸಲು ಸಾಧ್ಯವಾಗಿದೆ' ಎಂದು ಹೇಳಿದ್ದಾರೆ.
'ಜಿಂದ್- ದೆಹಲಿ ನಡುವಿನ ಮಾರ್ಗದಲ್ಲಿಯೂ ಪರೀಕ್ಷೆಗಳು ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಈ ರೈಲು ದೆಹಲಿಗೆ ತಲುಪಲಿದೆ' ಎಂದು ವೈಷ್ಣವ್ ತಿಳಿಸಿದ್ದಾರೆ.
ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ: (ಚಂಡೀಗಢ): ಜಲಜನಕ ಚಾಲಿತ ರೈಲು ಚಾಲನೆ ಬಳಿಕ ₹14,700 ಕೋಟಿ ವೆಚ್ಚದ ವಿವಿಧ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಭೂಮಿಪೂಜೆ ನೆರವೇರಿಸಿದರು.
₹9,680 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ದೆಹಲಿ- ಅಮೃತಸರ-ಕಟ್ರಾ ನಡುವೆ 157.92 ಕಿ.ಮೀ ಉದ್ದದ ನಾಲ್ಕು ಪಥದ ಹೆದ್ದಾರಿಯನ್ನು ಲೋಕಾರ್ಪಣೆಗೊಳಿಸಿದರು.
ನೂತನ ಹೆದ್ದಾರಿಯಿಂದ ದೆಹಲಿ- ಕಟ್ರಾ ನಡುವೆ ಪ್ರಯಾಣದ ಅವಧಿಯು 14 ತಾಸಿನಿಂದ 6 ತಾಸಿಗೆ ಇಳಿಕೆಯಾಗಲಿದೆ. ದೆಹಲಿ-ಅಮೃತಸರ ನಡುವೆ 8 ರಿಂದ 4 ತಾಸಿಗೆ ಇಳಿಕೆಯಾಗಲಿದೆ. ರಾಷ್ಟ್ರೀಯ ಹೆದ್ದಾರಿ 44(ಜಿ.ಟಿ ರಸ್ತೆ) ಮೇಲಿನ ಒತ್ತಡವನ್ನು ಕಡಿಮೆ ಮಾಡಲಿದ್ದು, ಮಾತಾ ವೈಷ್ಣೋದೇವಿ ದೇವಾಲಯಕ್ಕೆ ಸುಲಭ ಸಂಚಾರ ವ್ಯವಸ್ಥೆ ಕಲ್ಪಿಸಿದೆ.
ಇದಲ್ಲದೇ, 33.81 ಕಿ.ಮೀ. ಉದ್ದದ ಅಂಬಾಲ-ಕಾಲ ಅಂಬ ನಾಲ್ಕು ಪಥದ ಹೆದ್ದಾರಿ, ಜಿಂದ್- ಗೋಹಾನ ನಡುವಿನ 40.60 ಕಿ.ಮೀ ಉದ್ದದ ಹಸಿರು ಹೆದ್ದಾರಿಯನ್ನು ಉದ್ಘಾಟಿಸಿದರು. ಇದರಿಂದ ಜಿಂದ್‌ನಿಂದ ರೋಹ್ಟಕ್, ಪಾಣಿಪತ್ ಹಾಗೂ ದೆಹಲಿ ನಗರಕ್ಕೆ ಸಂಚಾರ ವ್ಯವಸ್ಥೆ ಸುಗಮವಾಗಲಿದೆ.
ಚಂಡೀಗಢದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಿವಾನಿಯ ಪಂಡಿತ್ ನೆಕಿ ರಾಮ್ ಶರ್ಮಾ ವೈದ್ಯಕೀಯ ಕಾಲೇಜು, ಕೊರಿಯಾವಸ್‌ನ ಮಹರ್ಷಿ ಚ್ಯವನ್ ವೈದ್ಯಕೀಯ ಕಾಲೇಜು, ನರನೌಲ್‌ನ ರಾವ್ ತುಲಾ ರಾಮ್ ಆಸ್ಪತ್ರೆ ಗಳಲ್ಲಿ ₹4,700 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ವಿವಿಧ ಸೌಕರ್ಯಗಳನ್ನು ಈ ವೇಳೆ ಉದ್ಘಾಟಿಸಿದರು.

