ತಿರುವನಂತಪುರ: ಬೀದಿನಾಯಿಗಳು ಕಚ್ಚುವ ಆತಂಕದಿಂದಾಗಿ ತ್ರಿಶ್ಶೂರ್ ಜಿಲ್ಲೆಯ ಚೂಂಡಲ್ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆಗೆ ಸೋಮವಾರ ಮತ್ತು ಮಂಗಳವಾರ ರಜೆಯನ್ನು ಘೋಷಿಸಲೇಬೇಕಾದ ಒತ್ತಡ ಎದುರಾಯಿತು.
ಬೀದಿ ನಾಯಿಯೊಂದು ಶಾಲೆ ವಿದ್ಯಾರ್ಥಿಯನ್ನು ಕೆಲವು ದಿನಗಳ ಹಿಂದೆ ಕಡಿದಿತ್ತು.
ಶಾಲಾ ಆವರಣದಲ್ಲಿ ಹಲವು ಬೀದಿನಾಯಿಗಳು ಆಶ್ರಯ ಪಡೆದಿದ್ದವು. ಒಂದು ಹೆಣ್ಣು ನಾಯಿ ಶಾಲಾ ಆವರಣದಲ್ಲಿಯೇ ಮರಿಗಳಿಗೆ ಜನ್ಮ ನೀಡಿತ್ತು. ಆ ಮರಿಗಳು ಶಾಲೆಯ ತುಂಬೆಲ್ಲಾ ಓಡಾಡಿಕೊಂಡಿದ್ದವು. ವಿದ್ಯಾರ್ಥಿಯೊಬ್ಬರಿಗೆ ನಾಯಿ ಕಡಿದಿದ್ದರಿಂದ ಪೋಷಕರು ಮಕ್ಕಳನ್ನು ಶಾಲೆ ಕಳುಹಿಸಲು ಹಿಂಜರಿಯತೊಡಗಿದರು. ಇದರಿಂದಲೇ ಶಾಲೆಗೆ ರಜೆ ಘೋಷಿಸಬೇಕಾಯಿತು.
'ಬೀದಿ ನಾಯಿಗಳನ್ನು ಹಿಡಿಯಲು ಪಂಚಾಯಿತಿ ವತಿಯಿಂದ ಅಭಿಯಾನವನ್ನೇ ಕೈಗೊಳ್ಳಲಾಯಿತು. ಶಾಲೆಯ ಸುತ್ತಮುತ್ತಲ ಪ್ರದೇಶಗಳಿಂದ ಹಲವು ಬೀದಿ ನಾಯಿಗಳನ್ನು ಸೆರೆಹಿಡಿಯಲಾಗಿದೆ. ಒಂದು ಅಥವಾ ಎರಡು ಬೀದಿ ನಾಯಿಗಳು ಉಳಿದಿರಬಹುದು. ಬುಧವಾರದಿಂದ ಶಾಲೆ ಆರಂಭವಾಗಲಿದೆ' ಎಂದು ಪಂಚಾಯಿತಿ ಅಧ್ಯಕ್ಷ ಸಿನಿ ಪ್ರಸಾದ್ ಹೇಳಿದರು.

