ಪಣಜಿ: ಮಹಿಳೆಯರ ಮೇಲಿನ ದೌರ್ಜನ್ಯದ ಕುರಿತು ಕೃತಿ ರಚನೆಗಾಗಿ ಒಂದು ಲಕ್ಷ ರೂ. ಮೊತ್ತದ ಫೆಲೋಶಿಪ್ ಪಡೆಯುವ ಉದ್ದೇಶದಿಂದ ದೂರುದಾರೆಯು ಅತ್ಯಾಚಾರದ ಆರೋಪವನ್ನು ಸೃಷ್ಟಿಸಿದ್ದಾರೆ ಎಂದು ತೆಹೆಲ್ಕಾ ಸುದ್ದಿ ಸಂಸ್ಥೆಯ ಸಂಸ್ಥಾಪಕ ತರುಣ್ ತೇಜ್ ಪಾಲ್ ಪರ ಹಿರಿಯ ವಕೀಲ ಆಬಾದ್ ಪೊಂಡಾ ಗೋವಾದ ಬಾಂಬೆ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು.
ತರುಣ್ ತೇಜ್ ಪಾಲ್ ಅವರನ್ನು 2021ರಲ್ಲಿ ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಗೋವಾ ಸರ್ಕಾರ ಸಲ್ಲಿಸಿರುವ ಮೇಲ್ಮನವಿಯ ಅಂತಿಮ ಹಂತದ ವಿಚಾರಣೆ ನಡೆಯುತ್ತಿದೆ. ಜುಲೈ 16ರಿಂದ ತೇಜ್ ಪಾಲ್ ಪರ ವಾದ ಮಂಡಿಸುತ್ತಿರುವ ಪೊಂಡಾ ಅವರ ವಾದವನ್ನು ಆಲಿಸಿದ ನ್ಯಾಯಾಲಯವು ಶನಿವಾರ ಮೂರು ದಿನಗಳ ವಿಚಾರಣೆಯನ್ನು ಪೂರ್ಣಗೊಳಿಸಿತು.
ಪ್ರಕರಣವು ರಾಜಕೀಯ ಪ್ರೇರಿತವಾಗಿದೆ ಎಂದು ವಾದಿಸಿದ ಪೊಂಡಾ, ದೂರುದಾರೆಯ ನಡತೆ, ಡಿಜಿಟಲ್ ದಾಖಲೆಗಳು ಹಾಗೂ ದೂರುದಾರೆ ಮತ್ತು ಆಕೆಯ ಸ್ನೇಹಿತರ ನಡುವಿನ ವಾಟ್ಸ್‌ಆಯಪ್ ಸಂದೇಶಗಳನ್ನು ಉಲ್ಲೇಖಿಸಿ, ದೂರುದಾರೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದರು.
ದೂರುದಾರೆ ಮತ್ತು ಆಕೆಯ ಕೆಲವು ಸ್ನೇಹಿತರ ನಡುವಿನ ವಾಟ್ಸ್‌ಆಯಪ್ ಸಂಭಾಷಣೆಗಳ ಭಾಗವನ್ನು ನ್ಯಾಯಾಲಯದಲ್ಲಿ ಓದಿ ಹೇಳಿದ ಅವರು, 'ಅನುಮಾನಕ್ಕೆ ಆಸ್ಪದವಿಲ್ಲದ ಚಿಂತಕರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ಹೊರಿಸುವ ಉದ್ದೇಶ ಹೊಂದಿದ್ದೇನೆ' ಎಂಬ ಸಂದೇಶವನ್ನು ನ್ಯಾಯಾಲಯದ ಗಮನಕ್ಕೆ ತಂದರು. ನಂತರ ಆ ಸಂದೇಶವನ್ನು ದೂರುದಾರೆ ತಮಾಷೆಯಾಗಿ ಬರೆದಿದ್ದಾಗಿ ವಿವರಿಸಿದ್ದರು ಎಂದೂ ಅವರು ಹೇಳಿದರು.
ಆ ಸಂದೇಶವು ಸಮಕಾಲೀನ ದಾಖಲೆಯಾಗಿರುವುದರಿಂದ, ದೂರುದಾರೆಯ ವಿಶ್ವಾಸಾರ್ಹತೆಯನ್ನು ಮೌಲ್ಯಮಾಪನ ಮಾಡುವಾಗ ಅದನ್ನೂ ಪರಿಗಣಿಸಬೇಕು ಎಂದು ಪೊಂಡಾ ನ್ಯಾಯಾಲಯವನ್ನು ಕೋರಿದರು.
ಈ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಡಾ. ನೀಲಾ ಗೋಖಲೆ ಮತ್ತು ಅಮಿತ್ ಎಸ್. ಜಮ್ಷಂದೇಕರ್ ಅವರಿದ್ದ ವಿಭಾಗೀಯ ಪೀಠ ನಡೆಸಿತು. ಗೋವಾ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಜುಲೈ 30ರಂದು ಪ್ರತಿವಾದ ಮಂಡಿಸಲಿದ್ದು, ಬಳಿಕ ನ್ಯಾಯಾಲಯವು ತೀರ್ಪನ್ನು ಕಾಯ್ದಿರಿಸುವ ಸಾಧ್ಯತೆ ಇದೆ.

